ಸುರತ್ಕಲ್: ಎನ್‌ಐಟಿಕೆ ಟೋಲ್ ಗೇಟ್ ವಿರುದ್ಧದ ಮುಂದುವರಿದ ಧರಣಿ

ಸುರತ್ಕಲ್: ಫೆ,15: ಸಾಮಾಜಿಕ ಹೋರಾಟಗಾರ ಆಸೀಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎನ್‌ಐಟಿಕೆ ಅಕ್ರಮ ಟೋಲ್ ಗೇಟ್ ವಿರುದ್ಧದ ಅಹೋರಾತ್ರಿ ಧರಣಿಯು ಮಂಗಳವಾರವೂ ನಡೆದಿದೆ.
ಈ ಸಂದರ್ಭ ಬ್ರಿಟಿಷರ ದಬ್ಬಾಳಿಕೆಯನ್ನು ನೆನಪಿಸುವ ಅಣುಕು ಪ್ರದರ್ಶನ ನಡೆಯಿತು. ಅಂದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಬ್ರಿಟಿಷರ ವೇಷಗಳನ್ನು ತೊಟ್ಟು ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುತ್ತಿದ್ದ ಆಂಗ್ಲರ ಲೂಟಿ-ದಬ್ಬಾಳಿಕೆಯು ಈಗ ಟೋಲ್ಗೇಟ್ ರೀತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಆಸೀಫ್ ಆಪತ್ಬಾಂಧವ ಟೋಲ್ ಗೇಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಉಡುಪಿ ಜಿಲ್ಲಾಧ್ಯಕ್ಷರು ರೆಹಮಾನ್ ಪಡುಬಿದ್ರಿ, ತಾಲೂಕು ಅಧ್ಯಕ್ಷ ಸುಜಿತ್ ಪಡುಬಿದ್ರಿ, ಶಿರ್ವ ವಲಯ ಅಧ್ಯಕ್ಷ ಸಿದ್ದೀಕ್ ಮಂಚಕಲ್. ರಿಲಯನ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಮುಬಾರಕ್ ಬೊಳ್ಳೂರು, ಹಕೀಂ ಇಂದಿರಾನಗರ ಮತ್ತಿತರು ಸಾಥ್ ನೀಡಿದರು.