ಅಕ್ಷರದ ಅಹಂಕಾರವೂ ಜಾನಪದ ಲೋಕಜ್ಞಾನವೂ
ಮಾನ್ಯರೇ,
ಮಾನ್ಯ ಮಹೇಶ್ ಜೋಷಿಯವರು ಒಂದು ಪಕ್ಷದ ಬೆಂಬಲ ಪಡೆದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ಎದುರಿಸಿದಾಗಲೇ ಇದುವರೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದ್ದ ಸ್ವಾಯತ್ತತೆಯ ಘನತೆಗೆ ಧಕ್ಕೆ ಬಂದಿತು. ಅವರು ಅಧಿಕಾರ ಗ್ರಹಣ ಮಾಡಿಕೊಂಡಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಜವಾದ ಜನಮುಖಿ ಆಶಯ ಪರಷತ್ತಿನಿಂದ ಹೊರ ಬಂದಿತು. ಇದರ ಪರಿಣಾಮ ಈಗ ಅಲ್ಲಿ ಇರುವುದು ಸಾಹಿತ್ಯ ವಿರೋಧಿ ಸರ್ವಾಧಿಕಾರಿ ಧೋರಣೆ. ಆದ್ದರಿಂದಲೇ ಸ್ವಾಯತ್ತತೆಯನ್ನು ಗೌರವಿಸಿದಂತೆ ಗೆದ್ದು ಬಂದಿರುವ ಜಿಲ್ಲಾಧ್ಯಕ್ಷರುಗಳನ್ನು ಗಣನೆಗೇ ತೆಗೆದುಕೊಳ್ಳದಂತೆ ದಿನಕ್ಕೊಂದು ಬಗೆಯ ಹೇಳಿಕೆಗಳೂ ಹೊರಬರುತ್ತಿವೆ.
ಸಾಹಿತ್ಯವೆಂಬುದು ಕೇವಲ ಅಕ್ಷರವಂತರ ಸ್ವತ್ತಲ್ಲ. ನಮ್ಮ ಕನ್ನಡದಲ್ಲಿಯೇ ಇಪ್ಪತ್ತಕ್ಕೂ ಅಧಿಕ ಜನಪದ ಮಹಾಕಾವ್ಯಗಳಿವೆ. ಅವುಗಳನ್ನು ಹಾಡುವ ವಕ್ತೃಗಳು ಅನಕ್ಷರಸ್ಥರು. ಆದರೆ ಅವರು ಈ ಮಹಾಕಾವ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಸೃಜನಶೀಲ ಸಮುದಾಯಪ್ರಜ್ಞೆಗಳಾಗಿದ್ದಾರೆ. ಕನ್ನಡದಲ್ಲಿನ ಅಕ್ಷರವಂತರ ಮಹಾಕಾವ್ಯಗಳಿಗೆ ಇರುವ ಲೋಕದರ್ಶನಕ್ಕೆ ಮಿತಿಗಳಿವೆ. ಜಾನಪದರ ಲೋಕದರ್ಶನ ಇರುವೆಂಬತ್ತು ಕೋಟಿ ಜೀವರಾಶಿಗಳಿಗೂ ಈ ಭೂಮಿಯ ವಾರಸುದಾರರು ಎಂಬ ಜೀವಪರ ಧರ್ಮನಿಷ್ಠೆಯದು. ಇಂತಹ ಮಹಾಜನಪದ ಪರಂಪರೆಯ ವೃತ್ತಿಗಾಯಕರನ್ನು, ಜನಪದ ಕಲಾವಿದರನ್ನು ಸಾಹಿತ್ಯ ಪರಿಷತ್ತಿನಿಂದ ಹೊರಗಿಟ್ಟರೆ ಅದು ನಿಜವಾದ ನೆಲಮೂಲ ಕನ್ನಡ ಪರಂಪರೆಗೆ ಮಾಡುವ ದ್ರೋಹಕೃತ್ಯ. ಅನಕ್ಷರಸ್ಥರನ್ನು ಸದಸ್ಯರನ್ನಾಗಿ ಸ್ವೀಕರಿಸದ ಸಾಹಿತ್ಯ ಪರಿಷತ್ತಿನ ಯಾವ ವೇದಿಕೆಗಳಿಗೂ ಜನಪದ ಸಾಹಿತಿಗಳು ಜನಪದ ಕಲಾವಿದರು ಭಾಗವಹಿಸದಂತೆ ಬಹಿಷ್ಕಾರ ಹಾಕಿದರೆ ಗತಿಯೇನು?
ಜನಪದ ಕಲಾವಿದರು ಬೀದಿಯ ಬೀರರು, ಗೊರವರು, ದುಂಡುಚಿಯವರು ಹೀಗೆಂದು ಕರೆದು ಅವರನ್ನು, ಅವರ ಸಾಹಿತ್ಯವನ್ನು ಹೊರಗಟ್ಟಿದ್ದು ಹತ್ತೊಂಬತ್ತನೇ ಶತಮಾನದವರೆಗೆ ಮಾಡಿದ ದ್ರೋಹವಾಗಿದೆ. ಈಗ ಈಗಿನ ಈ ಮಹಾನುಭಾವ ಅಧ್ಯಕ್ಷರು ಮತ್ತೆ ಅದನ್ನು ಮರುಸ್ಥಾಪಿಸಲು ಹೊರಟಿರುವುದು ಎಲ್ಲರಿಗೂ ಸಾಹಿತ್ಯವಲ್ಲ ಎಲ್ಲರಿಗೂ ಅಕ್ಷರವಲ್ಲ ಎಂಬ ಶ್ರೇಷ್ಠತೆಯ ವ್ಯಸನದ ರೋಗವೇ ಹೊರತು ಇದು ಬೇರೇನೂ ಅಲ್ಲ. ಇಂತಹ ರೋಗ ಕನ್ನಡ ಸಾಹಿತ್ಯಪರಿಷತ್ತಿಗೆ ವಕ್ಕರಿಸಿರುವುದು ಕನ್ನಡಕ್ಕೆ, ಕನ್ನಡಿಗರಿಗೆ ಕರ್ನಾಟಕಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಲಿದೆ. ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಸಾಹಿತ್ಯ ಪರಿಷತ್ತು ಶ್ರೇಷ್ಠತೆಯ ವ್ಯಸನದ ಮತಾಂಧ ಸಂಘಟನೆಯ ಕಬ್ಜಾ ಆಗುವ ಅಪಾಯವಿದೆ. ಒಂದು ಕೋಟಿ ಸದಸ್ಯತ್ವವನ್ನು ಮಾಡಹೊರಟಿರುವ ಈ ಮತೀಯ ರಾಜಕಾರಣದ ಸಂಚು ಯಾರಿಗೂ ಗೊತ್ತಾಗುವುದೇ ಆಗಿದೆ. ಇದು ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರದ ಅಧ್ಯಕ್ಷರ ಪರಮಾಧಿಕಾರದಂತೆ ನಡೆಯ ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯ ನಡೆಯೇ ಸರಿ. ಮಾಡಬೇಕಾದ ಕೆಲಸಗಳು ಎದುರಿಸಬೇಕಾದ ಸಮಸ್ಯೆಗಳು ಬಂಡಿಗಟ್ಟಲೆ ಎದುರಿಗಿರುವಾಗ ಸರ್ವಾಧಿಕಾರ ಧೋರಣೆಯ ಅಹಂಕಾರದ ವರ್ತನೆ ಸಾಹಿತ್ಯ ಲೋಕದ ಸಹತತ್ವದ ದಾರಿಯ ನಡೆಯಲ್ಲ.
-ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ. ಚಂದ್ರಶೇಖರ್ ತಾಳ್ಯ, ಡಾ.ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಪುರುಷೋತ್ತಮ್ ಬಿಳಿಮಲೆ, ಡಾ.ರೂಪಹಾಸನ್, ರುದ್ರಪ್ಪ ಹನಗವಾಡಿ, ಡಾ. ಬಿ.ಟಿ. ಲಲಿತಾನಾಯಕ್, ಡಾ.ವಸುಂಧರಾ ಭೂಪತಿ, ಡಾ. ನಲ್ಲೂರು ಪ್ರಸಾದ್, ಡಾ. ಕೆ.ಪುಟ್ಟಸ್ವಾಮಿ, ಡಾ. ಕೆ.ಷರೀಫ





