ಮಂಡ್ಯ ಕಾರ್ಖಾನೆ ವಿಷಾನಿಲ ಸೋರಿಕೆ ಪ್ರಕರಣದಲ್ಲಿ ವರದಿ ಬಂದ ನಂತರ ಕ್ರಮ: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು, ಫೆ.15: ಮಂಡ್ಯ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಿಂದ ವಿವಿಷಾನಿಲ ಸೋರಿಕೆಯಾಗಿ ರೈತರ ಬೆಳೆ ನಷ್ಟವಾಗಿದ್ದರ ಕುರಿತು ಸಮೀಕ್ಷೆ ನಡೆಸಿ ವರದಿ ಬಂದ ನಂತರ ರೈತರಿಗೆ ಪರಿಹಾರ ಕೊಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ ಕಾರಕಟ್ಟೆ ಗ್ರಾಮದ ಸಮೀಪದಲ್ಲಿರುವ ರಾಸಾಯನಿಕ ತಯಾರಿಕಾ ಕಾರ್ಖಾನೆಯಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗಿರುವುದು ಈಗಾಗಲೇ ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು.
ಇದರಿಂದ ಸುತ್ತಮುತ್ತಲಿನ ಸುಮಾರು 15 ಎಕರೆ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆಯಲಾಗಿದ್ದ ತೆಂಗು, ರಾಗಿ, ಹುರಳಿ ಸೇರಿದಂತೆ ಮತ್ತಿತರ ಬೆಳೆಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿ ಬಹುತೇಕವಾಗಿ ರೈತರಿಗೆ ನಷ್ಟವಾಗಿದೆ. ಇದಲ್ಲದೆ ಕಾರ್ಖಾನೆ ಹೊರಸೂಸುವ ವಿಷಾನಿಲದಿಂದ ಜನ ಹಾಗೂ ಜಾನುವಾರುಗಳ ಆರೋಗ್ಯವು ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಅವರು ತಿಳಿಸಿದರು.
ಇದರಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರಕಾರದ ವತಿಯಿಂದ ಅಥವಾ ಕಾರ್ಖಾನೆಯಿಂದ ಸೂಕ್ತ ಪರಿಹಾರವನ್ನು ನೀಡಬೇಕು. ಇದಲ್ಲದೆ ಒಂದು ವೇಳೆ ಆ ವಿಷಾನಿಲ ತ್ಯಾಜ್ಯವು ಅಲ್ಲಿನ ಕುಡಿಯುವ ನೀರಿನ ಕಾಲುವೆಗೆ ಸೇರಿದ್ದರೆ ಸಾಕಷ್ಟು ಪ್ರಮಾಣದಲ್ಲಿ ಪ್ರಾಣಹಾನಿಯಾಗಲಿದೆ. ಹಾಗಾಗಿ ರೈತರ ಹಿತದೃಷ್ಟಿಯಿಂದ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ದಿನೇಶ್ ಗೂಳಿಗೌಡ ಆಗ್ರಹಿಸಿದರು.







