ಕೋಡಿಂಬಾಳ: ವಿಷಜಂತು ಕಡಿದು ರೈತ ಮೃತ್ಯು

ಕಡಬ, ಫೆ.16. ತೋಟಕ್ಕೆ ಸ್ಪ್ರಿಂಕ್ಲರ್ ಅಳವಡಿಸಲು ಹೋದ ರೈತನೋರ್ವ ವಿಷಜಂತು ಕಡಿದು ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಕೋಡಿಂಬಾಳ ಗ್ರಾಮದ ಪೆಲತ್ತೊಡಿ ನಿವಾಸಿ ಧರ್ಮಪಾಲ ಗೌಡ ಎಂದು ಗುರುತಿಸಲಾಗಿದೆ. ಇವರು ತಮ್ಮಮನೆಯ ಹತ್ತಿರದಲ್ಲಿರುವ ತೋಟಕ್ಕೆ ಸ್ಪ್ರಿಂಕ್ಲರ್ ಅಳವಡಿಸಲು ಹೋದ ಸಂದರ್ಭ ಯಾವುದೋ ವಿಷಜಂತು ಅವರ ಕಾಲಿಗೆ ಕಡಿದಿದ್ದು, ಮನೆಯ ಹತ್ತಿರ ಬರುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆನ್ನಲಾಗಿದೆ.
ತಕ್ಷಣವೇ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಅಷ್ಟೊತ್ತಿಗೆ ಅವರು ಕೊನೆಯುಸಿರೆಳೆದಿದ್ದರು.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story