ಆಸಿಫ್ ಆಪತ್ಬಾಂಧವ ತಂಡದ ಪ್ರತಿಭಟನೆಗೆ ಅಡ್ಡಿ: ದೂರು
ಆರು ಮಂದಿ ಮಂಗಳಮುಖಿಯರು ಪೊಲೀಸ್ ವಶಕ್ಕೆ

ಮಂಗಳೂರು, ಫೆ.16: ಸುರತ್ಕಲ್‌ನ ಎನ್‌ಐಟಿಕೆ ಟೋಲ್ ಗೇಟ್ ಬಳಿ ಕಳೆದ ಹಲವು ದಿನಗಳಿಂದ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿರುವ ಆಸಿಫ್ ಆಪತ್ಬಾಂಧವ ಹಾಗೂ ಅವರ ತಂಡಕ್ಕೆ ಮಂಗಳಮುಖಿಯರು ಅಡ್ಡಿಪಡಿಸಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣದ ಬಗ್ಗೆ ಇಂದು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸುರತ್ಕಲ್ ಟೋಲ್‌ನಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಕಳೆದ ಕೆಲವು ದಿನಗಳಿಂದ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ರಾತ್ರಿ ಆರು ಮಂದಿ ಮಂಗಳಮುಖಿಯರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಒಡ್ಡಿರುವುದಾಗಿ ಆಸಿಫ್ ಎಂಬವರು ದೂರು ನೀಡಿದ್ದಾರೆ.
ಮಂಗಳಮುಖಿಯರು ತಮ್ಮ ಜತೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ನಿಂದನೆ, ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಕಾರಣ, ಮಂಡ್ಯ ಪಾಂಡವಪುರದ ವಾಸವಿ ಗೌಡ (32), ದಾವಣಗೆರೆಯ ಲಿಪಿಕಾ (19), ಹಾಸನದ ಹಿಮಾ (24), ಮೈಸೂರಿನ ಆದ್ಯ (22), ಮಾಯಾ (28), ರಾಮನಗರದ ಮೈತ್ರಿ (28) ಎಂಬ ಆರು ಮಂದಿ ಮಂಗಳಮುಖಿಯರನ್ನು ವಶಕ್ಕೆ ಪಡೆಯಲಾಗಿದೆ. ಅವರು ಹೇಳಿರುವ ವಿಳಾಸದಲ್ಲಿ ಗೊಂದಲವಿದ್ದು, ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ಇದೇ ವೇಳೆ ಮಂಗಳಮುಖಿಯರೂ ಕೂಡ ತಾವು ಭಿಕ್ಷಾಟನೆ ಮಾಡುತ್ತಿದ್ದ ಸಂದರ್ಭ ಪ್ರತಿಭಟನೆ ನಡೆಸುವವರು ಹಾಗೂ ಅವರ ಜತೆಗಿದ್ದವರು ತಮ್ಮ ವೀಡಿಯೋ, ಫೋಟೋ ತೆಗೆದು ಛೇಡಿಸಿದ್ದಾರೆ. ರಾತ್ರಿ ಸಮಯ ಹಣ ಕೊಟ್ಟು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ತಾವು ತಮ್ಮ ಮುಖಂಡರ ಸಲಹೆ ಪಡೆದು ದೂರು ನೀಡುವುದಾಗಿ ಅವರು ಹೇಳಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿರುವುದು ಗೊತ್ತಾದಾಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ಕ್ರಮ ವಹಿಲಾಗಿದೆ ಎಂದು ಎನ್. ಶಶಿಕುಮಾರ್ ತಿಳಿಸಿದರು.
ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅಲ್ಲಿ ಅನಧಿಕೃತವಾಗಿ, ಅನುಮತಿ ಇಲ್ಲದೆ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಆ ಜಾಗಕ್ಕೆ ಸಂಬಂಧಪಟ್ಟವರು ದೂರು ನೀಡಬೇಕಾಗುತ್ತದೆ. ನಿನ್ನೆ ತಡರಾತ್ರಿ ಅಲ್ಲಿ ಅಹಿತಕರ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ವಹಿಸಿದೆ. ಆ ಟೋಲ್‌ಗೇಟ್ ಅಧಿಕೃತ ಅಥವಾ ಅನಧಿಕೃತ ಎಂದು ನಿರ್ಧರಿಸಲು ಸಂಬಂಧಪಟ್ಟ ಇಲಾಖೆಯಿದೆ. ಅಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಪೊಲೀಸ್ ಇಲಾಖೆ ಬಗ್ಗೆಯೂ ಅಲ್ಲದ ಕಾರಣ ಈವರೆಗೂ ಇಲಾಖೆ ಗಮನ ಹರಿಸಿರಲಿಲ್ಲ. ಆದರೆ ಅಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.