ನಟ ದೀಪ್ ಸಿಧು ರಸ್ತೆ ಅಪಘಾತಕ್ಕೆ ಬಲಿ : ಅಪರಿಚಿತ ಟ್ರಕ್ ಚಾಲಕನ ವಿರುದ್ಧ ಎಫ್ಐಆರ್

Photo: Facebook
ಚಂಡಿಗಡ: ಪಂಜಾಬಿ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ್ದು, ಈ ಘಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅಪರಿಚಿತ ಚಾಲಕನ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು India Today ಬುಧವಾರ ವರದಿ ಮಾಡಿದೆ.
ರಾತ್ರಿ 8.30 ರ ಸುಮಾರಿಗೆ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ವೇಯಲ್ಲಿ ಪಿಪ್ಲಿ ಟೋಲ್ ಪ್ಲಾಜಾ ಬಳಿ ನಿಂತಿದ್ದ ಟ್ರಕ್ಗೆ ಅವರ ಕಾರು ಡಿಕ್ಕಿ ಹೊಡೆದು 37 ವರ್ಷದ ನಟ ಸಾವನ್ನಪ್ಪಿದ್ದಾರೆ. ಅವರು ತಮ್ಮ ಸ್ನೇಹಿತೆ ರೀನಾ ರೈ ಅವರೊಂದಿಗೆ ಹೊಸದಿಲ್ಲಿಯಿಂದ ಪಂಜಾಬ್ಗೆ ಪ್ರಯಾಣಿಸುತ್ತಿದ್ದರು. ರೈ ಅಪಘಾತದಿಂದ ಪಾರಾಗಿದ್ದಾರೆ.
ಸೋನಿಪತ್ ಜಿಲ್ಲೆಯ ಪೊಲೀಸರು ಸಿಧು ಅವರ ಸಹೋದರ ಸುರ್ಜಿತ್ ಅವರ ದೂರಿನ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ. ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅತಿವೇಗದ ಚಾಲನೆ) ಮತ್ತು ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿ ಪ್ರಕರಣ ದಾಖಲಿಸಿದ್ದಾರೆ.
"ಟ್ರಕ್ನ ಪಾರ್ಕಿಂಗ್ ದೀಪಗಳು ಗೋಚರಿಸಲಿಲ್ಲ ಹಾಗೂ ಕತ್ತಲೆಯಾಗಿತ್ತು. ಇದು ಟ್ರಕ್ನ ಚಾಲಕನ ಸಂಪೂರ್ಣ ನಿರ್ಲಕ್ಷ್ಯದ ಕ್ರಿಯೆಯಾಗಿದ್ದು, ಇದರಿಂದಾಗಿ ಕಾರು, ಟ್ರಕ್ಗೆ ಡಿಕ್ಕಿ ಹೊಡೆದಿದೆ ಹಾಗೂ ಇದರ ಪರಿಣಾಮವಾಗಿ ನನ್ನ ಸಹೋದರನಿಗೆ ಅನೇಕ ಮಾರಣಾಂತಿಕ ಗಾಯಗಳಾಗಿವೆ " ಎಂದು ಸುರ್ಜೀತ್ ತನ್ನ ದೂರಿನಲ್ಲಿ ಹೇಳಿದ್ದಾರೆ.







