'ಹಿಜಾಬ್-ಕೇಸರಿ ವಿಚಾರವನ್ನು ರಾಜಕೀಯ ಗೊಳಿಸಿದ್ದೇ ಬಿಜೆಪಿಯ ಅಂಗ ಸಂಸ್ಥೆಗಳು': ಡಿ.ಕೆ. ಸುರೇಶ್ ಆರೋಪ

ಹಾಸನ : ಫೆ. 16, ಹಿಜಾಬ್ ಮತ್ತು ಕೇಸರಿ ವಿವಾದವನ್ನು ರಾಜಕೀಯಗೊಳಿಸಿದ್ದೇ ಬಿಜೆಪಿಯ ಅಂಗ ಸಂಸ್ಥೆಗಳಾಗಿದ್ದು, ನಿರ್ವಹಿಸುವಲ್ಲಿ ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಾಸನ ಜಿಲ್ಲೆಯ ಉಸ್ತುವಾರಿ, ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ನಂದ ಗೋಕುಲ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಿಜಿಟಲ್ ಸದಸ್ಯತ್ವ ಕಾರ್ಯಗಾರದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಜಾವ್ ವಿಚಾರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ಇಲ್ಲ. ಇದೆಲ್ಲವು ಸರ್ಕಾರದ ಪ್ರಾಯೋಜಿತ ಎಂದು ಇದನ್ನು ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಹಿಜಾಬ್ ಕೇಸರಿ ವಿವಾದ ರಾಜಕೀಯ ಗೊಳಿಸಿದ್ದೇ ಬಿಜೆಪಿ ಪಕ್ಷ. ಇದು ಪ್ರಾರಂಭ ಆಗಿದ್ದು ಬಿಜೆಪಿಯ ಅಂಗ ಸಂಸ್ಥೆಗಳಿಂದ ಹೊರತು ಇದು ಏಕಾ ಏಕಿ ಬಂದಿದ್ದಲ್ಲ, ಫೆಬ್ರವರಿ ಐದರವರೆಗೆ ಒಂದು ಆದೇಶ ಇತ್ತು, ಅದು ಬದಲಾದ ಬಳಿಕ ಗೊಂದಲ ಶುರುವಾಗಿದೆ ಎಂದು ಹೇಳಿದರು.
ಕೇಸರಿ ದ್ವಜವನ್ನು ಕೆಂಪುಕೋಟೆ ಮೇಲೆ ಹಾರಿಸಬೇಕು ಎಂದು ಒಬ್ಬ ಹಿರಿಯ ಸಚಿವರು ಹೇಳಿಕೆ ಕೊಡ್ತಾರೆ. ಅವರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು. ಅವರನ್ನು ಸಂಪುಟದಿಂದ ಕೈಬಿಡಬೇಕು. ಅದನ್ನು ಬಿಟ್ಟು ಬೇರೆ ವಿಚಾರ ಮಾತಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈಶ್ವರಪ್ಪನವರು ಸಂವಿದಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಕೆಂಪು ಕೋಟೆ ಮೇಲೆ ಕೇಸರಿ ದ್ಚಜ ಹಾರಿಸುತ್ತೇನೆ ಎಂದಾಗ ಯಾರೂ ಪ್ರತಿಭಟಿಸಲ್ಲ. ನಾಳೆ ಇನ್ನೊಂದು ಹೇಳ್ತಾರೆ, ಇದು ಪರಿಪಾಠ ಆಗಿದೆ ಎಂದು ಟೀಕಿಸಿದರು. ಬಿಜೆಪಿ ಅವರಿಗೆ ಹಿಂದೆ ಇದ್ದದ್ದು ಏನೂ ಬೇಡ. ಈಗ ರಾಷ್ಟ್ರ ದ್ವಜ ಉಳಿಸಬೇಕಿರೋದು ನಮ್ಮ ಕರ್ತವ್ಯ, ಧರ್ಮ ಉಳಿಸಬೇಕಿರೊದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತೆ.
ಇದೇ ವೇಳೆ ರಾಜ್ಯ ಮುಖ್ಯ ಸಂಯೋಜಕರಾದ ರಘುನಂದನ್, ರಾಮಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಬನವಾಸೆ ರಂಗಸ್ವಾಮಿ, ಹೆಚ್.ಕೆ. ಮಹೇಶ್, ದೇವರಾಜೇಗೌಡ, ಬಾಗೂರು ಮಂಜೇಗೌಡ, ಸಣ್ಣಸ್ವಾಮಿ, ಹೆಚ್.ಕೆ. ಜವರೇಗೌಡ, ತಾರಾ ಚಂದನ್, ಹೆಚ್.ಎಸ್. ಆನಂದ್ ಕುಮಾರ್, ರಂಗಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಸಮದ್, ವಿನೋದ್ ಇತರರು ಉಪಸ್ಥಿತರಿದ್ದರು.







