ಉ.ಪ್ರ. ಚುನಾವಣೆಯ 3ನೇ ಹಂತದಲ್ಲಿ ಕಣಕ್ಕಿಳಿದಿರುವ 135 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳು: ಎಡಿಆರ್

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಸ್ಪರ್ಧಿಸುತ್ತಿರುವ 623 ಅಭ್ಯರ್ಥಿಗಳ ಪೈಕಿ ಶೇ 22ರಷ್ಟು ಅಥವಾ 135 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ADR) ಹೇಳಿದೆ. ಮೂರನೇ ಹಂತದ ಚುನಾವಣೆ ರಾಜ್ಯದಲ್ಲಿ ಫೆಬ್ರವರಿ 20ರಂದು ನಡೆಯಲಿದೆ.
ಈ 135 ಅಭ್ಯರ್ಥಿಗಳ ಪೈಕಿ 103 ಮಂದಿ ಅಥವಾ ಶೇ 17ರಷ್ಟು ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಹಾಗೂ ಈ ಪ್ರಕರಣಗಳಲ್ಲಿ ಕೊಲೆ, ಅಪಹರಣ ಮತ್ತು ಅತ್ಯಾಚಾರ ಕೇಸುಗಳೂ ಸೇರಿವೆ ಎಂದು ತಿಳಿಸಿದೆ.
ಬಿಜೆಪಿಯ 20, ಸಮಾಜವಾದಿ ಪಕ್ಷದ 21, ಬಹುಜನ್ ಸಮಾಜ್ ಪಕ್ಷದ 18, ಕಾಂಗ್ರೆಸ್ ಪಕ್ಷದ 10 ಮತ್ತು ಆಮ್ ಆದ್ಮಿ ಪಕ್ಷದ 11 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಎಡಿಆರ್ ತನ್ನ ವರದಿಯಲ್ಲಿ 59 ಕ್ಷೇತ್ರಗಳಲ್ಲಿ 26 ಕ್ಷೇತ್ರಗಳನ್ನು `ರೆಡ್ ಅಲರ್ಟ್' ಕ್ಷೇತ್ರಗಳು ಎಂದು ಬಣ್ಣಿಸಿದ್ದು ಇಲ್ಲಿ ಮೂರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಅಭ್ಯರ್ಥಿಗಳ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಕುರಿತ ಮಾಹಿತಿಯನ್ನು ತಮ್ಮ ವೆಬ್ಸೈಟ್ಗಳು, ದಿನಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ 2020ರಲ್ಲಿ ತಿಳಿಸಿತ್ತಲ್ಲದೆ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನು ಏಕೆ ಕಣಕ್ಕಿಳಿಸಲಾಗಿದೆ ಎಂಬ ಬಗ್ಗೆ ವಿವರಣೆಯನ್ನೂ ನೀಡಬೇಕೆಂದು ಸೂಚಿಸಿತ್ತು.
ಆದರೆ ಕೋರ್ಟ್ ಆದೇಶವು ರಾಜಕೀಯ ಪಕ್ಷಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಹಾಗೂ ಉತ್ತರ ಪ್ರದೇಶದ ಮೂರನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ. 22ರಿಂದ ಶೇ. 52ರಷ್ಟು ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನೇ ಎಲ್ಲಾ ಪ್ರಮುಖ ಪಕ್ಷಗಳು ಕಣಕ್ಕಿಳಿಸಿವೆ ಎಂದು ಎಡಿಆರ್ ಹೇಳಿದೆ.







