ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸಚಿವ ಈಶ್ವರಪ್ಪ- ಡಿ.ಕೆ ಶಿವಕುಮಾರ್ ವಾಕ್ಸಮರ
ಸಚಿವ ಈಶ್ವರಪ್ಪ ನೀಡಿದ್ದ ಹೇಳಿಕೆ ವಿರುದ್ಧ ಸದನದಲ್ಲಿ ಕಾಂಗ್ರೆಸ್ ಧರಣಿ

ಬೆಂಗಳೂರು, ಫೆ. 16: ‘ದಿಲ್ಲಿಯ ಕೆಂಪುಕೋಟೆಯ ಮೇಲೆ ಭಗವಾ(ಕೇಸರಿ)ಧ್ವಜ ಹಾರಿಸುತ್ತೇವೆ' ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಏಕವಚನದಲ್ಲಿವಾಗ್ವಾದ ನಡೆಯಿತಲ್ಲದೆ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಮಾರ್ಷಲ್‍ಗಳು ಮಧ್ಯಪ್ರವೇಶಿಸಿದ ಪ್ರಸಂಗವು ವಿಧಾನಸಭೆಯಲ್ಲಿ ನಡೆಯಿತು.
ಬುಧವಾರ ಸಚಿವ ಈಶ್ವರಪ್ಪ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಂಡನೆ ವೇಳೆ ಡಿ.ಕೆ.ಶಿವಕುಮಾರ್, ‘ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸಿದ ಈಶ್ವರಪ್ಪ ದೇಶದ್ರೋಹಿ, ಹೀಗಾಗಿ ಅವರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ' ಎಂದರು. ಇದರಿಂದ ಕೆರಳಿದ ಈಶ್ವರಪ್ಪ, ‘ಇದೇನು ನಿಮ್ಮಪ್ಪನ ಮನೆ ಆಸ್ತಿಯಲ್ಲ' ಎಂದು ಏರಿದ ಧ್ವನಿಯಲ್ಲಿ ಡಿಕೆಶಿ ವಿರುದ್ಧ ಏಕವಚನ ಪ್ರಯೋಗಿಸಿದರು. ‘ಇದೇನು ನಿಮ್ಮಪ್ಪನ ಮನೆ ಆಸ್ತಿನೇ?' ಎಂದು ಶಿವಕುಮಾರ್ ತಿರುಗೇಟು ನೀಡಿದರು.
ಇದೇ ವೇಳೆ ತೋಳುತಟ್ಟಿದ ಸಚಿವ ಈಶ್ವರಪ್ಪ, ಶಿವಕುಮಾರ್ ಗೆ ‘ತಾಕತ್ತಿದ್ದರೆ ಮುಂದೆ ಬಾ' ಎಂಬಂತೆ ಆಹ್ವಾನಿಸಿದರು. ಇದಕ್ಕೆ ಏರಿದ ಧ್ವನಿಯಲ್ಲಿ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಹೀಗಾಗಿ ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಈ ಹಂತದಲ್ಲಿ ಆಕ್ರೋಶಿತರಾದ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು, ಈಶ್ವರಪ್ಪ ವಿರುದ್ಧ ಮುಗಿಬಿದ್ದರು. ಬಿಜೆಪಿ ಸದಸ್ಯರು ಈಶ್ವರಪ್ಪ ಕೂತಿದ್ದ ಆಸನದ ಬಳಿಗೆ ಧಾವಿಸಿದರು.
ಈ ಸಂದರ್ಭದಲ್ಲಿ ಮುಂದಿನ ಪರಿಸ್ಥಿತಿ ಅರಿತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು. ಮಾರ್ಷಲ್‍ಗಳಿಗೆ ಪರಿಸ್ಥಿತಿ ನಿಭಾಯಿಸಲು ಕೂಡಲೇ ಸ್ಥಳದಲ್ಲೆ ಸೂಚನೆ ನೀಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಾರ್ಷಲ್‍ಗಳು ಎರಡೂ ಕಡೆಯವರನ್ನು ನಿಯಂತ್ರಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಏರಿದ ಧ್ವನಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದು, ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದು ನಡೆಯಿತು.
ಇದೇ ವೇಳೆ ಕಾಂಗ್ರೆಸ್ ಸದಸ್ಯರಾದ ಬೈರತಿ ಸುರೇಶ್, ಕಂಪ್ಲಿ ಗಣೇಶ್, ಪ್ರಿಯಾಂಕ್ ಖರ್ಗೆ, ‘ಈಶ್ವರಪ್ಪ ಆಕ್ರೋಶದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಕರೆಯಿರಿ ಅವರನ್ನು ಹೊಡೆಯುತ್ತಾರೇನೋ?' ಎಂದು ಆಹ್ವಾನಿಸಿದರು. ಅಲ್ಲದೆ, ಆಡಳಿತ ಪಕ್ಷದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ ಸದಸ್ಯರು ಈಶ್ವರಪ್ಪನವರಿಗೆ ಬೆಂಗಾವಲಾಗಿ ನಿಂತು ರಕ್ಷಿಸಿದ ಪ್ರಸಂಗವೂ ನಡೆಯಿತು.
ಆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ, ಈಶ್ವರಪ್ಪ ಸೇರಿ ಬಿಜೆಪಿ ಸದಸ್ಯರು ಬಿ.ಎಸ್.ಯಡಿಯೂರಪ್ಪನವರತ್ತ ತೆರಳಿ ತಮ್ಮಲ್ಲೆ ಚರ್ಚೆಗೆ ತೊಡಗಿದರು. ಇತ್ತ ಕಾಂಗ್ರೆಸ್ ಸದಸ್ಯರು, ‘ದಿಲ್ಲಿ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆಂದ ಈಶ್ವರಪ್ಪ ದೇಶದ್ರೋಹಿ, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಅವರ ಗೂಂಡಾ ವರ್ತನೆ ಸರಿಯಲ್ಲ' ಎಂದು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟದಿಂದ ವಜಾ ಮಾಡಿ: ‘ಸಚಿವ ಈಶ್ವರಪ್ಪನವರು ನಮ್ಮೆಲ್ಲರ ಹೆಮ್ಮೆ, ಆತ್ಮಗೌರವ, ಅಸ್ಮಿತೆಯ ಸಂಕೇತವಾಗಿರುವ ರಾಷ್ಟ್ರಧ್ವಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅಲ್ಲದೆ, ದಿಲ್ಲಿಯ ಕೆಂಪುಕೋಟೆ ಕೇಸರಿ ಧ್ವಜ ಹಾರಿಸುತ್ತೇವೆಂದು ಹೇಳಿಕೆ ನೀಡಿದ್ದು, ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರಂಭಕ್ಕೆ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಂಡಿಸಿ ಆಗ್ರಹಿಸಿದರು.
‘ಈಶ್ವರಪ್ಪ ಹೇಳಿಕೆ ಎಲ್ಲ ಮಾಧ್ಯಮದಲ್ಲಿ ಬಿತ್ತರ ಆಗಿದೆ, ಪತ್ರಿಕೆಗಳಲ್ಲಿಯೂ ಪ್ರಕಟ ಆಗಿದೆ. ನಮ್ಮ ಧ್ವಜ, ರಾಷ್ಟ್ರಗೀತೆಗೆ ಎಲ್ಲರೂ ಗೌರವ ನೀಡಬೇಕು, ಅದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ನಾವು ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸುತ್ತೇವೆ. ನಾವೆಲ್ಲರೂ ಸಂವಿಧಾನಕ್ಕೆ ತಲೆಬಾಗುತ್ತೇವೆ. ರಾಷ್ಟ್ರಧ್ವಜ ನಮ್ಮ ಸ್ಫೂರ್ತಿಯ ಧ್ಯೋತಕ' ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
‘ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿರುತ್ತದೆ. ಅಲ್ಲಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ. ಇದಕ್ಕೆ ಹಲವು ಕಾನೂನುಗಳಿವೆ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಗೆ ಅವಮಾನ ಮಾಡಿದರೆ, ಅದು ದೇಶದ್ರೋಹ. ಫೆ.9ಕ್ಕೆ ಈಶ್ವರಪ್ಪ ಹೇಳಿಕೆ ನೀಡಿದ್ದು, ಇಂದಿಗೆ ಅವರು ಹೇಳಿಕೆ ನೀಡಿ 6 ದಿನಗಳ ಕಳೆದರೂ ಮುಖ್ಯಮಂತ್ರಿ ಯಾವುದೇ ಕ್ರಮ ವಹಿಸಿಲ್ಲ. ಈಶ್ವರಪ್ಪರಿಗೆ ಸಂಪುಟದಲ್ಲಿ ಮುಂದುವರಿಯುವ ಅರ್ಹತೆಯೇ ಇಲ್ಲ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಪ್ರತಿಪಕ್ಷ ನಾಯಕರು ಪ್ರಸ್ತಾಪ ಮಾಡಿದ ರೀತಿಯಲ್ಲಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸುವ ವೇಳೆ ‘ಇನ್ನೂ ನೂರು-ನೂರೈವತ್ತು ವರ್ಷಗಳ ನಂತರ ಕೇಸರಿ ಧ್ವಜ ಹಾರಾಡಬಹುದು' ಎಂದು ಹೇಳಿದ್ದಾರೆ. ಅವರು ಎಲ್ಲಿಯೂ ರಾಷ್ಟ್ರಧ್ವಜಕ್ಕೆ ಅಗೌರವ ತರುವ ರೀತಿಯಲ್ಲಿ ಹೇಳಿಲ್ಲ. ಹೀಗಾಗಿ ನಿಲುವಳಿ ಸೂಚನೆಯಡಿ ಈ ವಿಷಯ ತೆಗೆದುಕೊಳ್ಳಲು ಬರುವುದಿಲ್ಲ' ಎಂದು ತಿಳಿಸಿದರು.
ಜಟಾಪಟಿ: ‘ಈಶ್ವರಪ್ಪರ ಹೆಸರು ಉಲ್ಲೇಖ ಮಾಡಿದ್ದು ಅವರು ಇಲ್ಲೇ ಇದ್ದಾರೆ. ಅವರೇನು ಹೇಳ್ತಾರೆ ಕೇಳೋಣ' ಎಂದು ಸ್ಪೀಕರ್ ಕಾಗೇರಿ ತಿಳಿಸಿದರು. ಈ ವೇಳೆ ಈಶ್ವರಪ್ಪ ಎದ್ದು ನಿಂತರು. ಅವರ ವಿರುದ್ಧ ಡಿ.ಕೆ.ಶಿವಕುಮಾರ್, ಅವರು ದೇಶದ್ರೋಹಿ ಎಂದು ಛೇಡಿಸಿದರು. ಇದರಿಂದ ಕೇರಳಿದ ಈಶ್ವರಪ್ಪ, ನೀನು, ನಿಮ್ಮಪ್ಪ ಬಂಡೆ ಲೂಟಿ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಇರುವವನು? ರಾಜ್ಯದ ಸಂಪತ್ತು ಲೂಟಿಗೈದ ನೀನು ದೇಶದ್ರೋಹಿ' ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಹೀಗಾಗಿ ಸದನದಲ್ಲಿ ತೀವ್ರ ಗದ್ದಲ-ಕೋಲಾಹಲ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ‘ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದರು' ಎಂದು ರಾಜ್ಯದಲ್ಲಿ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದು ನೀವು ಎಂದು ಶಿವಕುಮಾರ್ ಅವರನ್ನು ಕೆಣಕಿದರು. ‘ಬಿಜೆಪಿಯಲ್ಲಿ ಯಾರೂ ಜೈಲಿಗೆ ಹೋಗಿ ಬಂದಿರುವವರು ಇಲ್ಲವೇ? ಎಂದು ರಾಮಲಿಂಗಾರೆಡ್ಡಿ, ಈಶ್ವರಪ್ಪ ಕಾಳೆಲೆದರು. ‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶಕ್ಕಾಗಿ ನಾವು ಜೈಲಿಗೆ ಹೋಗಿಬಂದಿದ್ದೇವೆ. ನಿಮ್ಮವರೆಲ್ಲ ಲೂಟಿ ಮಾಡಿ ಜೈಲಿಗೆ ಹೋಗಿಬಂದಿದ್ದಾರೆ' ಎಂದು ಈಶ್ವರಪ್ಪ ವಾಗ್ವಾದ ನಡೆಸಿದರು. ‘ಬಿಜೆಪಿ ಹುಬ್ಬಳಿಯಿಂದ ಕಾಶ್ಮೀರದವರೆಗೆ ರಾಷ್ಟ್ರಧ್ವಜಕ್ಕಾಗಿ ಹೋರಾಟ ಮಾಡಿದೆ. ಹೀಗಾಗಿ ಎಂದಿಗೂ ಬಿಜೆಪಿ ರಾಷ್ಟ್ರಧ್ವಜಕ್ಕೆ ಅಗೌರವ ಮಾಡುವ ಪ್ರಶ್ನೆಯೆ ಇಲ್ಲ' ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
‘ಪ್ರತಿಪಕ್ಷ ಕಾಂಗ್ರೆಸ್‍ನವರು ಹಿಜಾಬ್(ಸ್ಕಾರ್ಫ್) ವಿವಾದದಿಂದ ಹೈರಾಣಾಗಿದ್ದು, ಇದೀಗ ಸುಖಾಸುಮ್ಮನೆ ಈಶ್ವರಪ್ಪನವರ ವಿಚಾರ ಹಿಡಿದುಕೊಂಡಿದ್ದಾರೆ. ದಿಲ್ಲಿ ಕೆಂಪುಕೋಟೆಯ ಮೇಲೆ ರೈತರ ಪ್ರತಿಭಟನೆ ನೆಪದಲ್ಲಿ ಖಲಿಸ್ತಾನ ಧ್ವಜವನ್ನು ಹಾರಾಟ ಮಾಡಿದರು. ಹೀಗಾಗಿ ಅಲ್ಲಿ ದೇಶದ್ರೋಹ ಕೇಸು ದಾಖಲಾಗಿದೆ. ಆತ ನಿನ್ನೆ ಸಾವನ್ನಪ್ಪಿದ್ದಾನೆ'
-ಆರಗ ಜ್ಞಾನೇಂದ್ರ ಗೃಹ ಸಚಿವ
'ದಿಲ್ಲಿ ಕೆಂಪುಕೋಟೆಯ ಮೇಲೆ ರೈತರ ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ರಾಷ್ಟ್ರಧ್ವಜ ಸಮೀಪದಲ್ಲಿ ಬೇರೆ ಧ್ವಜವನ್ನು ಹಾರಾಟ ಮಾಡಿದ ಕಾರಣಕ್ಕೆ ಆತನ ವಿರುದ್ಧ ದೇಶದ್ರೋಹ ಕೇಸು ದಾಖಲಿಸಲಾಗಿತ್ತು. ಇದೀಗ ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದು, ಅವರ ವಿರುದ್ಧವೂ ದೇಶದ್ರೋಹದ ಮೊಕದ್ದಮೆ ದಾಖಲು ಮಾಡಬೇಕು'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
‘ದಿಲ್ಲಿ ಕೆಂಪುಕೋಟೆ ಮೇಲೆ ಖಲಿಸ್ತಾನ ಧ್ವಜವನ್ನು ಹಾರಿಸಿದ್ದರು ಎಂಬುದು ಸಾಬೀತು ಮಾಡಬೇಕು. ಸುಳ್ಳು ಹೇಳಿಕೆ ನೀಡುವುದು ಗೃಹ ಸಚಿವರ ಸ್ಥಾನದ ಘನತೆಗೆ ತಕ್ಕುದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಮಗೆ ಶೋಭೆ ತರುವುದಿಲ್ಲ'
-ಯು.ಟಿ.ಖಾದರ್ ವಿಪಕ್ಷ ಉಪನಾಯಕ







