ಕೋವಿಡ್ ಲಸಿಕೆ ತೆಗೆದುಕೊಳ್ಳಲು ಒತ್ತಡ ಹಾಕಿದರೆ ಮುಂದಿನ ಟೂರ್ನಿ, ಟ್ರೋಫಿಗಳನ್ನೂ ಬಿಡಲು ಸಿದ್ಧ: ನೊವಾಕ್ ಜೊಕೊವಿಕ್

Photo- PTI
ಲಂಡನ್, ಫೆ.16: ಕೋವಿಡ್-19 ಲಸಿಕೆ ತೆಗೆದುಕೊಳ್ಳಲು ನನ್ನ ಮೇಲೆ ಒತ್ತಡ ಹಾಕಿದರೆ ಮುಂಬರುವ ಟೂರ್ನಿ ಹಾಗೂ ಟ್ರೋಫಿಗಳನ್ನೂ ತ್ಯಜಿಸಲು ಸಿದ್ಧವಿದ್ದೇನೆ ಎಂದು ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.
''ವ್ಯಾಕ್ಸಿನ್ ವಿರೋಧಿ ಆಂದೋಲನದೊಂದಿಗೆ ನನ್ನನ್ನು ಗುರುತಿಸಬಾರದು. ಆಯ್ಕೆ ಮಾಡುವ ವ್ಯಕ್ತಿಯ ಸ್ವಾತಂತ್ರವನ್ನು ನಾನು ಬೆಂಬಲಿಸುತ್ತೇನೆ''ಎಂದು 20 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ಹೇಳಿದರು.
ಲಸಿಕೆ ಕುರಿತು ತಮ್ಮ ನಿಲುವಿನಿಂದಾಗಿ ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ನಂತಹ ಪ್ರತಿಷ್ಠಿತ ಟೂರ್ನಿಗಳನ್ನು ತ್ಯಾಗ ಮಾಡುತ್ತೀರಾ ಎಂದು ಸರ್ಬಿಯ ಆಟಗಾರನಲ್ಲಿ ಕೇಳಿದಾಗ, ''ಹೌದು, ನಾನು ಅದಕ್ಕೆ ಬೆಲೆ ತೆರಲು ಸಿದ್ಧ'' ಎಂದರು.
ಜೊಕೊವಿಕ್ ಕಳೆದ ತಿಂಗಳು ವರ್ಷದ ಮೊದಲ ಗ್ರಾನ್ಸ್ಲಾಮ್ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸಲು ವಿಫಲರಾಗಿದ್ದರು. ವ್ಯಾಕ್ಸಿನ್ ತೆಗೆದುಕೊಳ್ಳದ ಕಾರಣ ಅವರನ್ನು ಆಸ್ಟ್ರೇಲಿಯದಿಂದ ಗಡಿಪಾರು ಮಾಡಲಾಗಿತ್ತು. ಗಡಿಪಾರಿಗೂ ಮೊದಲು ಎರಡು ಬಾರಿ ಅವರ ವೀಸಾವನ್ನು ರದ್ದುಪಡಿಸಲಾಗಿತ್ತು.
''ನಾನು ಎಂದಿಗೂ ಲಸಿಕೆ ವಿರುದ್ಧವಾಗಿಲ್ಲ. ನಾನು ಬಾಲ್ಯದಲ್ಲಿ ಲಸಿಕೆ ಹಾಕಿಕೊಂಡಿದ್ದೆ. ಆದರೆ ನಾನು ಯಾವಾಗಲೂ ನಿಮ್ಮ ದೇಹಕ್ಕೆ ಏನನ್ನು ತೆಗೆದುಕೊಳ್ಳಬೇಕೆಂಬ ಸ್ವಾತಂತ್ರವನ್ನು ಬೆಂಬಲಿಸುವೆ'' ಎಂದರು.
ಮತ್ತಷ್ಟು ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಏಕೆ ಬಿಡುತ್ತಿದ್ದೀರಿ ಎಂದು ಕೇಳಿದಾಗ, ''ನನ್ನ ದೇಹಕ್ಕೆ ಸಂಬಂಧಿಸಿ ತೆಗೆದುಕೊಳ್ಳುವ ನಿರ್ಧಾರದ ತತ್ವಗಳು ಯಾವುದೇ ಪ್ರಶಸ್ತಿ ಅಥವಾ ಬೇರೆ ಎಲ್ಲದಕ್ಕಿಂತಲೂ ಹೆಚ್ಚು ಮುಖ್ಯವಾಗಿದೆ. ನಾನು ಸಾಧ್ಯವಾದಷ್ಟು ನನ್ನ ದೇಹಕ್ಕೆ ಹೊಂದಿಕೆಯಾಗಲು ಪ್ರಯತ್ನಿಸುತ್ತೇನೆ'' ಎಂದರು.
ಜೊಕೊವಿಕ್ ಈ ತಿಂಗಳು ನಿಗದಿಯಾಗಿರುವ ದುಬೈ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜೊಕೊವಿಕ್ ಮುಂದಿನ ತಿಂಗಳು ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ಇಂಡಿಯನ್ ವೆಲ್ಸ್ ಟೂರ್ನಿಯ ಪ್ರವೇಶ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.