ಶಾಲಾ ವಿದ್ಯಾರ್ಥಿಗಳಿಗೆ 'ನನ್ನ ಆದರ್ಶ-ನಾಥೂರಾಂ ಗೋಡ್ಸೆ' ಭಾಷಣ ಸ್ಪರ್ಧೆ ಏರ್ಪಡಿಸಿದ ಅಧಿಕಾರಿ ಅಮಾನತು

ಅಹ್ಮದಾಬಾದ್: 'ನನ್ನ ಆದರ್ಶ- ನಾಥೂರಾಂ ಗೋಡ್ಸೆ' ಎಂದು ಮಹಾತ್ಮ ಗಾಂಧಿಯ ಹಂತಕನ ವಿಷಯದ ಮೇಲೆ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿದ ವಲ್ಸಾದ್ ಜಿಲ್ಲೆಯ ಪ್ರೊಬೇಷನರಿ ಯುವಜನ ಅಭಿವೃದ್ಧಿ ಅಧಿಕಾರಿಯನ್ನು ಗುಜರಾತ್ ಸರಕಾರ ಬುಧವಾರ ಸೇವೆಯಿಂದ ಅಮಾನತುಗೊಳಿಸಿದೆ.
ಈ ಭಾಷಣ ಸ್ಫರ್ಧೆ- 'ಮಾರೋ ಆದರ್ಶ್-ನಾಥೂರಾಂ ಗೋಡ್ಸೆ' ಇದರಲ್ಲಿ ವಿದ್ಯಾರ್ಥಿನಿಯೊಬ್ಬಳು ಬಹುಮಾನ ಪಡೆದಿದ್ದಾಳೆಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದಾಗ ಬುಧವಾರ ಈ ಘಟನೆ ಬೆಳಕಿಗೆ ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿ ಮಿತಾಬೆನ್ ಗಾವ್ಲಿ ಅವರನ್ನು ರಾಜ್ಯ ಕ್ರೀಡಾ ಮತ್ತು ಯುವಜನ ಸಚಿವ ಹರ್ಷ್ ಸಘವಿ ಅಮಾನತುಗೊಳಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇಲಾಖೆಯ ವಲ್ಸದ್ ಘಟಕ ಈ ಸ್ಪರ್ಧೆಯನ್ನು 11ರಿಂದ 13 ವರ್ಷ ವಯೋಮಿತಿಯ ಮಕ್ಕಳಿಗಾಗಿ ಏರ್ಪಡಿಸಿತ್ತು. ಸ್ಪರ್ಧೆ ನಡೆದಿದ್ದ ಖಾಸಗಿ ಶಾಲೆಯ ಆಡಳಿತ ಸ್ಪಷ್ಟೀಕರಣ ನೀಡಿ ತಮ್ಮ ಶಾಲೆ ಈ ಸ್ಪರ್ಧೆಯನ್ನು ನಡೆಸಿದ ಅತಿಥೇಯ ಶಾಲೆಯಾಗಿದ್ದರೂ ಅದನ್ನು ಆಯೋಜಿಸಿರಲಿಲ್ಲ ಎಂದು ಹೇಳಿದೆ.





