ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಪೊಟ್ಟಣ ವಿತರಣೆ

ಮಂಗಳೂರು, ಫೆ.16:ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಮಂಗಳೂರಿನ ರಾಮಕೃಷ್ಣ ರಿಜಿಸ್ಟ್ರಾರ್ ಕೋಆಪರೇಟಿವ್ ಹಾಗೂ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಕ್ಷಯ ರೋಗ ಕುರಿತ ಮಾಹಿತಿ ಕಾರ್ಯಾಗಾರ ಮತ್ತು ಪೌಷ್ಟಿಕ ಆಹಾರ ಪೊಟ್ಟಣಗಳ ವಿತರಣಾ ಕಾರ್ಯಕ್ರಮವು ಬುಧವಾರ ನಡೆಯಿತು.
ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ 2030ಕ್ಕೆ ದೇಶ ಕ್ಷಯರೋಗ ಮುಕ್ತವಾಗಲು ವೈದ್ಯರು ಹಾಗೂ ರೋಗಿಗಳ ಸಹಕಾರ ಅಗತ್ಯವಿದೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯೂ ಕ್ಷಯರೋಗಕ್ಕೆ ಔಷಧವಾಗಿದೆ. ರೋಗಿಗಳು ಅದನ್ನು ಸೇವಿಸಿದರೆ ಕ್ಷಯ ಗಣನೀಯವಾಗಿ ಇಳಿಕೆಯಾಗುತ್ತದೆ. ಆ ಕಾರಣದಿಂದಾಗಿಯೇ ಸರಕಾರ ಮತ್ತು ಸ್ಥಳಿಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆರೋಗ್ಯ ಇಲಾಖೆ ಹಲವು ಕಾರ್ಯಗಾರಗಳನ್ನು ಆಯೋಜಿಸಿ ರೋಗಿಗಳಿಗೆ ಪೌಷ್ಟಿಕಾಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭ ರಾಮಕೃಷ್ಣ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜಯರಾಮ್ ರೈ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಬದ್ರುದ್ದೀನ್ ಎಂ.ಎನ್., ಜಿಲ್ಲಾ ವೈದ್ಯಕೀಯ ಸಲಹೆಗಾರ ಡಾ.ದೇವಿ ಗಣೇಶ್ ಉಪಸ್ಥಿತರಿದ್ದರು.