'ಕುಂಟು ನೆಪ ಹೇಳುವುದನ್ನು ಬಿಟ್ಟು ಬಿಡಿ': ಸರಕಾರದ ಕಾರ್ಯವೈಖರಿಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಆಕ್ಷೇಪ

ಬೆಂಗಳೂರು, ಫೆ. 16: ‘ಕುಂಟು ನೆಪ ಹೇಳುವುದನ್ನು ಬಿಟ್ಟು ಕೊಡುಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಿಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು' ಎಂದು ಆಡಳಿತ ಪಕ್ಷದ ಸದಸ್ಯ ಅಪ್ಪಚ್ಚು ರಂಜನ್ ಎಂ.ಪಿ., ಸರಕಾರವನ್ನು ಕುಟುಕಿದ ಪ್ರಸಂಗ ನಡೆಯಿತು.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪರವಾಗಿ ಸಚಿವ ಕಾರಜೋಳ ನೀಡಿದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, 2020ರ ಆಗಸ್ಟ್ 3ರಂದು ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಸದರಿ ಕಟ್ಟಡ ನಿರ್ಮಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಈ ವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ‘ಸದರಿ ಕಾಮಗಾರಿಯ ನಿವೇಶನದಲ್ಲಿ ಅರಣ್ಯ ಇಲಾಖೆ ಮರಗಳಿದ್ದು ಅನುಮತಿ ಪಡೆದು ಮರಗಳನ್ನು ತೆರವುಗೊಳಿಸಲು ವಿಳಂಬವಾಗಿದೆ. ಜೊತೆಗೆ ಕೋವಿಡ್, ಲಾಕ್‍ಡೌನ್‍ನಿಂದ ಕಟ್ಟಡ ಕಾರ್ಮಿಕರ ಸಮಸ್ಯೆಯಾಗಿದೆ. ಹೀಗಾಗಿ 2022ರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು' ಎಂದು ಭರವಸೆ ನೀಡಿದರು.
ಅವರ ಮುಖ ಕಾಣಿಸಬೇಕಲ್ಲ: ‘ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶ್ನೋತ್ತರ ಅವಧಿಯಲ್ಲಿ ಇರಬೇಕು. ಮೇಲ್ಮನೆ(ಪರಿಷತ್)ಯಲ್ಲಿ ನಿಲುವಳಿ ಸೂಚನೆ ಬಂದಿದೆ ಎಂದು ಹೇಳಿದ್ದಾರೆ, ಇರಲಿ. ಆದರೆ, ಅವರು ಇಲ್ಲಿ ಮುಖ ತೋರಿಸಬೇಕಲ್ಲ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ಮಾಡಿದರು.







