ಚೀನದ ಹುವಾವೆ ಕಂಪನಿಯ ಮೂರು ಕಚೇರಿಗಳಿಗೆ ತೆರಿಗೆ ಅಧಿಕಾರಿಗಳ ದಾಳಿ

SOURCE : PTI
ಹೊಸದಿಲ್ಲಿ,ಫೆ.16: ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಚೀನಾ ಮೂಲದ ದೂರಸಂಪರ್ಕ ಕಂಪನಿ ಹುವಾವೆಯ ದಿಲ್ಲಿ,ಗುರುಗ್ರಾಮ ಮತ್ತು ಬೆಂಗಳೂರುಗಳಲ್ಲಿಯ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದಾರೆ.
ಶೋಧ ಕಾರ್ಯಾಚರಣೆ ನಡೆಸಿದ ತೆರಿಗೆ ಅಧಿಕಾರಿಗಳು ಕಂಪನಿಯ ಹಿರಿಯ ಆಡಳಿತ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದಾಯ ತೆರಿಗೆ ಅಧಿಕಾರಿಗಳು ತನ್ನ ಕಚೇರಿಗಳಿಗೆ ಭೇಟಿ ನೀಡಿದ್ದನ್ನು ಹುವಾವೆ ದೃಢಪಡಿಸಿದೆ. ‘ಭಾರತದಲ್ಲಿಯ ನಮ್ಮ ಕಾರ್ಯಾಚರಣೆಗಳು ಎಲ್ಲ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ನಡೆಯುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಸರಕಾರಿ ಇಲಾಖೆಗಳನ್ನು ನಾವು ಸಂಪರ್ಕಿಸುತ್ತೇವೆ ಮತ್ತು ನಿಯಮಗಳಂತೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಹಾಗೂ ಸರಿಯಾದ ವಿಧಾನವನ್ನು ಅನುಸರಿಸುತ್ತೇವೆ ’ ಎಂದು ಹುವಾವೆ ಹೇಳಿಕೆಯಲ್ಲಿ ತಿಳಿಸಿದೆ.
ಭಾರತವು ಕಳೆದ ಮೇ ತಿಂಗಳಿನಲ್ಲಿ ದೇಶದಲ್ಲಿ 5ಜಿ ತಂತ್ರಜ್ಞಾನದ ಟ್ರಯಲ್ಗಳನ್ನು ನಡೆಸುವುದರಿಂದ ಹುವಾವೆ ಮತ್ತು ಇನ್ನೊಂದು ಚೀನಿ ಕಂಪನಿ ಝಟಿಈ ಅನ್ನು ಹೊರಗಿರಿಸಿತ್ತು. ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನತೆ ಮತ್ತು ಚೀನಾದಿಂದ ತಂತ್ರಜ್ಞಾನದ ಮೇಲೆ ಸರಕಾರದ ದಾಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಆದಾಯ ತೆರಿಗೆ ಇಲಾಖೆಯು ಕಳೆದ ಡಿಸೆಂಬರ್ನಲ್ಲಿ ಶಿಯೋಮಿ ಮತ್ತು ಒಪ್ಪೊ ಸೇರಿದಂತೆ ಹಲವಾರು ಚೀನಿ ಸ್ಮಾರ್ಟ್ಫೋನ್ ಕಂಪನಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಚೀನಿ ಮೊಬೈಲ್ ಫೋನ್ಗಳನ್ನು ತಯಾರಿಸುವ ಎರಡು ಕಂಪನಿಗಳಲ್ಲಿ 5,500 ಕೋ.ರೂ.ಗಳ ತೆರಿಗೆ ವಂಚನೆಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ಹೇಳಿದ್ದರು. ಈ ಕಂಪನಿಗಳು ಸಹವರ್ತಿ ಸಂಸ್ಥೆಗಳೊಂದಿಗಿನ ವಹಿವಾಟುಗಳನ್ನು ಬಹಿರಂಗಗೊಳಿಸಿಲ್ಲ,ಹೀಗಾಗಿ ಅವು 1,000 ಕೋ.ರೂ.ಗಳ ದಂಡವನ್ನು ಪಾವತಿಸಬೇಕಿದೆ ಎಂದಿದ್ದರು.







