ದ.ಕ. ಜಿಲ್ಲೆ : ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ತಡೆ

ಫೈಲ್ ಫೋಟೊ
ಮಂಗಳೂರು, ಫೆ.16: ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಪಿಯು ಮತ್ತು ಪದವಿ ಕಾಲೇಜುಗಳ ತರಗತಿಗಳು ದ.ಕ.ಜಿಲ್ಲೆಯಲ್ಲಿ ಬುಧವಾರ ಪುನರಾರಂಭಗೊಂಡರೂ ಕೂಡ ಹಿಜಾಬ್ ಧರಿಸಿ ಬಂದ ಕೆಲವು ಕಾಲೇಜಿನ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ ಪ್ರಸಂಗ ನಡೆದಿದೆ.
ನಗರದ ಕಾರ್ಸ್ಟ್ರೀಟ್ ಕಾಲೇಜಿನ ಇಬ್ಬರು ಮತ್ತು ಮುಲ್ಕಿಯ ಪದವಿ ಕಾಲೇಜಿನ 26 ವಿದ್ಯಾರ್ಥಿನಿಯರು ಬುಧವಾರ ಹಿಜಾಬ್ ಧರಿಸಿ ಬಂದಿದ್ದರು. ಅದಲ್ಲದೆ ವಿಟ್ಲ ಹಾಗೂ ಸುಳ್ಯದ ಪಿಯು ಕಾಲೇಜುಗಳಿಗೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ಆದರೆ ಅವರನ್ನೆಲ್ಲಾ ಕಾಲೇಜು ಪ್ರವೇಶಿಸಲು ಬಿಡದೆ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಸ್ಟ್ರೀಟ್ ಪದವಿ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ನ್ನು ಕಳಚಿಟ್ಟು ತರಗತಿ ಪ್ರವೇಶಿಸುವಂತೆ ಸೂಚಿಸಿದರು. ಅದಕ್ಕೆ ಒಪ್ಪದ ಕಾರಣ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಲಾಗಿದೆ ಎನ್ನಲಾಗಿದೆ.
ಮುಲ್ಕಿಯ ಖಾಸಗಿ ಕಾಲೇಜಿನಲ್ಲಿ 26 ಮತ್ತು ವಿಟ್ಲದ ಕಾಲೇಜಿನಲ್ಲಿ 11 ಹಾಗೂ ಸುಳ್ಯದ ಖಾಸಗಿ ಕಾಲೇಜಿನ 9 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಸಲು ಬಿಡಲಿಲ್ಲ ಎಂದು ತಿಳಿದು ಬಂದಿದೆ. ಬಂಟ್ವಾಳದ ವಾಮದ ಪದವಿನಲ್ಲಿ ಕಳೆದ ವಾರ ಹಿಜಾಬ್ ಧರಿಸಿದ ಆರು ಮಂದಿ ವಿದ್ಯಾರ್ಥಿನಿಯರು ಬುಧವಾರವೂ ಕಾಲೇಜಿಗೆ ಆಗಮಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಮಂಗಳೂರು ತಾಲೂಕಿನ ಮುಡಿಪು, ಮೊಂಟೆಪದವು, ಮುಲ್ಕಿ, ಮೂಡುಬಿದಿರೆಯ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಸೂಚನೆಯ ಮೇರೆಗೆ ಹಿಜಾಬ್ ಕಳಚಿ ತರಗತಿಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಧವಾರ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ಕಾಲೇಜುಗಳ 28 ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸಿದ ಕಾರಣಕ್ಕೆ ಮನೆಗೆ ಕಳುಹಿಸಿದರೆ, ಗ್ರಾಮಾಂತರದ ಪ್ರದೇಶದ ಮೂರು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ 35 ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಕಾಲೇಜುಗಳ 54 ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಳಿದಂತೆ ಜಿಲ್ಲೆಯ ಇತರ ಪದವಿ ಪೂರ್ವ ಹಾಗೂ ಪದವಿ ತರಗತಿಗಳು ನಿರಾತಂಕವಾಗಿ ನಡೆದಿದೆ. ದ.ಕ.ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಪ್ರಾಂಶುಪಾಲರು ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಉಪಸ್ಥಿತಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಸೂಚಿಸಿದರೂ ಕೂಡ ಕೆಲವು ಕಡೆಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಬುಧವಾರ ವಾಪಸ್ ಕಳುಹಿಸಿರುವ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಹೈಕೋರ್ಟ್ನ ಪೂರ್ಣ ಆದೇಶದ ಬಳಿಕವಷ್ಟೇ ತರಗತಿಗಳಿಗೆ ಹಾಜರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಆರು ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದರು. ಕಾಲೇಜು ಆಡಳಿತ ಮಂಡಳಿ ಶಾಂತಿಯುತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಲು ಕ್ರಮ ವಹಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಹೈಕೋರ್ಟ್ನ ಮಧ್ಯಂತರ ಆದೇಶದಂತೆ ಸಮವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರು ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ತರಗತಿಗೆ ಹಾಜರಾಗದಿರಲು ನಿರ್ಧರಿಸಿದರು. ಮುಡಿಪು ಪದವಿ ಕಾಲೇಜಿನ 22, ಮೊಂಟೆಪದವು ಪದವಿ ಪೂರ್ವ ಕಾಲೇಜಿನ 11 ಮಂದಿ, ಮುಲ್ಕಿಯ ಇಂದಿರಾ ನಗರ ಪದವಿ ಕಾಲೇಜಿನ 15 ಮಂದಿ, ಮೂಡುಬಿದಿರೆ ಮಹಾವೀರ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರು ಅವರನ್ನು ಪ್ರಾಂಶುಪಾಲರ ಕಚೇರಿಗೆ ಕರೆಸಿಕೊಂಡು ಮನವೊಲಿಸಲು ಪ್ರಯತ್ನಿಸಿದರು. ಆ ಪೈಕಿ ಕೆಲವರು ತರಗತಿಗೆ ಹಾಜರಾಗಿದ್ದಾರೆ.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಜರಗಿಸಲಾಗಿತ್ತು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.