ಶ್ರೀಲಂಕಾ: ಭಯೋತ್ಪಾದನೆ ತಡೆ ಕಾಯ್ದೆ ರದ್ದತಿಗೆ ಮಾನವ ಹಕ್ಕುಗಳ ಆಯೋಗ ಆಗ್ರಹ

ಸಾಂದರ್ಭಿಕ ಚಿತ್ರ
ಕೊಲಂಬೊ, ಫೆ.16: ಶಂಕಿತ ಆರೋಪಿಗಳನ್ನು ವಿಚಾರಣೆ ನಡೆಸದೆ ಬಂಧನದಲ್ಲಿಡಲು ಪೊಲೀಸರಿಗೆ ಅವಕಾಶ ಕಲ್ಪಿಸುವ ವಿವಾದಾತ್ಮಕ ಭಯೋತ್ಪಾದನೆ ತಡೆ ಕಾಯ್ದೆ(ಪಿಟಿಎ) ಯನ್ನು ಸಂಪೂರ್ಣ ರದ್ದುಗೊಳಿಸುವಂತೆ ಶ್ರೀಲಂಕಾದ ಮಾನವ ಹಕ್ಕುಗಳ ಆಯೋಗ ಬುಧವಾರ ಆಗ್ರಹಿಸಿದೆ.
ಭಯೋತ್ಪಾದನಾ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆಯ ಮೇಲೆ ಓರ್ವ ವ್ಯಕ್ತಿಯನ್ನು ವಾರಾಂಟ್ ಇಲ್ಲದೆ ಬಂಧಿಸುವ ಅಥವಾ ಆತನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುವ ಹಕ್ಕನ್ನು ಒದಗಿಸುವ ಪಿಟಿಎ ಕಾಯ್ದೆಯನ್ನು 1979ರಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆಯ ಮೂಲಕ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ತಮಿಳು ಮತ್ತು ಮುಸ್ಲಿಮ್ ರಾಜಕೀಯ ಪಕ್ಷಗಳು ನಿರಂತರ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿವೆ.
ರಾಜಕೀಯ-ಸೈದ್ಧಾಂತಿಕ ಅಥವಾ ಧಾರ್ಮಿಕ ಕಾರಣಕ್ಕಾಗಿ ನಾಗರಿಕರನ್ನು ಗುರಿಯಾಗಿಸಿ ಭೀತಿಯನ್ನು ಹರಡಲು ಹಿಂಸಾಚಾರವನ್ನು ಬಳಸುವವರಿಗೆ ಈ ಕಾಯ್ದೆ ಸೂಕ್ತವಾಗಿದೆ. ಆದರೆ ಶ್ರೀಲಂಕಾಕ್ಕೆ ಈ ಕಾಯ್ದೆಯ ಅಗತ್ಯವಿಲ್ಲ ಎಂದು ಶ್ರೀಲಂಕಾ ಮಾನವಹಕ್ಕುಗಳ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ರೋಹಿಣಿ ಮಾರಸಿಂಘೆ ಹೇಳಿದ್ದಾರೆ. ಕೆಲ ದಿನಗಳಿಂದ ತಮಿಳುನಾಡಿನ ಅಲ್ಪಸಂಖ್ಯಾತ ತಮಿಳು ಮತ್ತು ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಪಿಟಿಎ ಕಾಯ್ದೆ ರದ್ದತಿಗೆ ಆಗ್ರಹಿಸುವ ಸಹಿಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಿವೆ. ಧಾರ್ಮಿಕ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಸಂಸ್ಥೆಗಳು, ಕಾರ್ಮಿಕ ಯೂನಿಯನ್ಗಳ ಸದಸ್ಯರು, ಮಾನವ ಹಕ್ಕುಗಳ ಕಾರ್ಯಕರ್ತರು, ಜನಸಾಮಾನ್ಯರು ಆಗ್ರಹಕ್ಕೆ ಸಹಿ ಹಾಕಿದ್ದಾರೆ ಎಂದು ಅಭಿಯಾನದ ಸಂಘಟಕರು ಹೇಳಿದ್ದಾರೆ.
ಈ ಮಧ್ಯೆ, ಕಾಯ್ದೆಯ ಬಗ್ಗೆ ಯುರೋಪಿಯನ್ ಯೂನಿಯನ್ ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ಕಾಯ್ದೆಗೆ ತಿದ್ದುಪಡಿ ತರುವುದಾಗಿ ಕಳೆದ ತಿಂಗಳು ಶ್ರೀಲಂಕಾ ಸರಕಾರ ಅಧಿಸೂಚನೆ ಹೊರಡಿಸಿತ್ತು. ಕಳೆದ ವಾರ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಸರಕಾರ ಸಂಸತ್ತಿನಲ್ಲಿ ಮಂಡಿಸಿದ್ದು ಇದರಲ್ಲಿ ಬಂಧನದ ಅವಧಿಯ ಕಡಿತ, ಚಿತ್ರಹಿಂಸೆಯನ್ನು ನಿವಾರಿಸಲು ಬಂಧನದ ಸ್ಥಳಕ್ಕೆ ಮ್ಯಾಜಿಸ್ಟ್ರೇಟ್ ಭೇಟಿಗೆ ಅವಕಾಶ, ಬಂಧನದಲ್ಲಿರುವ ವ್ಯಕ್ತಿಗಳಿಗೆ ಕಾನೂನು ನೆರವು ಪಡೆಯಲು ಅವಕಾಶ, ಬಂಧಿತರ ಭೇಟಿಗೆ ಸಂಬಂಧಿಕರಿಗೆ ಅವಕಾಶ ಮುಂತಾದ ಕ್ರಮಗಳು ಈ ತಿದ್ದುಪಡಿ ಮಸೂದೆಯಲ್ಲಿವೆ. ಜತೆಗೆ, ಬಂಧಿತರ ಕ್ಷಿಪ್ರ ವಿಚಾರಣೆ, ಬಂಧಿತರಿಗೆ ಜಾಮೀನು ಪಡೆಯಲು ಅವಕಾಶ ಮುಂತಾದ ಉಪಕ್ರಮಗಳನ್ನೂ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.







