ಜಿ.ಪಂ ಸಿಇಓಗಳಿಗೆ ನೇಮಕಾತಿ ಅಧಿಕಾರ: ಸಚಿವ ಈಶ್ವರಪ್ಪ

ಬೆಂಗಳೂರು, ಫೆ. 16: ‘ಗ್ರಾಮ ಪಂಚಾಯತಿಯಲ್ಲಿ ನೇಮಕಕ್ಕೆ ಯಾವುದೇ ಗ್ರಾ.ಪಂ.ಗಳಿಗೆ ಅಧಿಕಾರ ನೀಡಿಲ್ಲ. ಬದಲಿಗೆ ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಅವರೇ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಲಿದ್ದಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಣೆ ನೀಡಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸುಕುಮಾರ ಶೆಟ್ಟಿ ಬಿ.ಎಂ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಈ ಹಿಂದೆ ಗ್ರಾ.ಪಂ. ಅಧ್ಯಕ್ಷರಿಗೆ ನೇಮಕಾತಿ ಅಧಿಕಾರ ನೀಡಲಾಗಿತ್ತು. ಮನಸೋ ಇಚ್ಛೆ ಸಿಬ್ಬಂದಿ ನೇಮಕ ಮಾಡಿಕೊಂಡ ಹಿನ್ನೆಲೆಯಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ ಅದನ್ನು ಬದಲಾವಣೆ ಮಾಡಲಾಗಿದೆ ಎಂದು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಕುಮಾರ ಶೆಟ್ಟಿ, ‘ಗ್ರಾ.ಪಂ.ಗಳಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಮತ್ತು ಅಟೆಂಡರ್ ಸೇರಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹೀಗಾಗಿ ನೇಮಕ ಅಧಿಕಾರ ನೀಡಬೇಕು' ಎಂದು ಆಗ್ರಹಿಸಿದರು. ‘ಸಿಇಓಗಳಿಗೆ ಪ್ರಸ್ತಾವನೆ ನೀಡಿದರೆ ಕೂಡಲೇ ಅವರು ನೇಮಕ ಮಾಡಲಿದ್ದಾರೆ. ಆದರೆ, ನೇಮಕ ಅಧಿಕಾರವನ್ನು ಪಂಚಾಯತಿಗಳಿಗೆ ನೀಡುವ ಉದ್ದೇಶ ಸರಕಾರಕ್ಕೆ ಇಲ್ಲ' ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಹುದ್ದೆ ಗುರುತಿಸಲು ಸಮಿತಿ:
‘ಗ್ರಾ.ಪಂ.ಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‍ಗಳ ಜೊತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಿದ್ದು, ಕೆಲಸ ಹೆಚ್ಚಿರುವ ಕಡೆಗಳಲ್ಲಿ ಅವರನ್ನು ನಿಯೋಜನೆ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ. ಹೀಗಾಗಿ ಗ್ರಾ.ಪಂ.ಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಗುರುತಿಸಲು ಪಂಚಾಯತ್ ರಾಜ್ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಚಿವ ಈಶ್ವರಪ್ಪ, ಬಿಜೆಪಿ ಸದಸ್ಯ ರಾಜೇಶ್ ನಾಯಕ್ ಪರವಾಗಿ ಸಂಜೀವ್ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.







