ಶಹಜಹಾನ್ಪುರ: ಬಿಜೆಪಿ ಅಭ್ಯರ್ಥಿ, ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲು

ಶಾಹಜಹಾನಪುರ (ಉತ್ತರಪ್ರದೇಶ), ಫೆ. 16: ಸೋಮವಾರ ಮತದಾನ ನಡೆದ ಬಳಿಕ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ತಮ್ಮ ನಿವಾಸಕ್ಕೆ ಆಗಮಿಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ತಿಹಾರ್ ವಿಧಾನ ಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಪುತ್ರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಸಲೋನಾ ಕುಶ್ವಾಹ ಅವರ ಬೆಂಬಲಿಗರು ಸಮಾಜವಾದಿ ಪಕ್ಷದ ಅಭ್ಯರ್ಥಿ ರೋಷನ್ಲಾಲ್ ವರ್ಮಾ ಸೇರಿದಂತೆ 7 ಮಂದಿಯ ವಿರುದ್ಧ ಈ ಹಿಂದೆ ಸೋಮವಾರ ರಾತ್ರಿ ವಿವಿಧ ಗಂಭೀರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಶಹಾಜಹಾನಪುರದ ತಿಹಾರ್ ವಿಧಾನ ಸಭಾ ಕ್ಷೇತ್ರದ ಮತದಾನ ಸೋಮವಾರ ಪೂರ್ಣಗೊಂಡ ಬಳಿಕ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಯ ಬೆಂಬಲಿಗರ ನಡುವೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ತಮ್ಮ ಮನೆಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ರೋಷನ್ಲಾಲ್ ವರ್ಮಾ ಅವರ ಪುತ್ರ ಮನೋಜ್ ಕುಮಾರ್ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಎಸ್. ಆನಂದ್ ಬುಧವಾರ ತಿಳಿಸಿದ್ದಾರೆ.
ಮನೋಜ್ ಕುಮಾರ್ ಅವರು ಬಿಜೆಪಿ ಅಭ್ಯರ್ಥಿ ಸಲೋನಾ ಕುಶ್ವಾಹ, ಅವರ 26 ಮಂದಿ ಬೆಂಬಲಿಗರು ಹಾಗೂ 250 ಅನಾಮಿಕ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಲೋನಾ ಕುಶ್ವಾಹ ಅವರು ತಮ್ಮ ಬೆಂಬಲಿಗರಿಗೆ ಉತ್ತೇಜನ ನೀಡಿದ್ದಾರೆ. ಅಲ್ಲದೆ, ಅವರು ಹಾಗೂ ಅವರ ಬೆಂಬಲಿಗರು ತಮ್ಮ ಪರವಾನಿಗೆ ಹೊಂದಿದೆ ಬಂದೂಕುಗಳಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯ ನಿವಾಸದಲ್ಲಿ ಸೋಮವಾರ ರಾತ್ರಿ ಗುಂಡು ಹಾರಿಸಿದ್ದಾರೆ ಹಾಗೂ ಅವರ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.







