ಚಿಕ್ಕಮಗಳೂರು: ಶಾಲಾಡಳಿತದಲ್ಲಿ ಮಧ್ಯ ಪ್ರವೇಶಿಸಿ ಅಧಿಕಾರಿಗಳಿಂದ ಕಿರುಕುಳ: ಖಾಸಗಿ ಶಾಲೆಗಳ ಅಸೋಸಿಯೇಷನ್ ಆರೋಪ

ಚಿಕ್ಕಮಗಳೂರು, ಫೆ.16: ರಾಜ್ಯಾದ್ಯಂತ ಖಾಸಗಿ ಶಾಲೆಗಳು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳು ಸಮಾಜ ಸೇವೆಯನ್ನೇ ಧ್ಯೇಯದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಆಡಳಿತದಲ್ಲಿ ಮಧ್ಯ ಪ್ರವೇಶ ಮಾಡಿ ಕಿರುಕುಳ ನೀಡುತ್ತಿವೆ ಎಂದು ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಸೋಸಿಯೇಷನ್ ಅಧ್ಯಕ್ಷ ನರೇಂದ್ರ ಪೈ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂರಾರು ಖಾಸಗಿ ಶಾಲೆಗಳು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸರಕಾರ ನೀಡುವ ಶಿಕ್ಷಣಕ್ಕಿಂತಲೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಕೋವಿಡ್ ಕಾರಣದಿಂದಾಗಿ ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟಕ್ಕೀಡಾಗಿದ್ದರೂ ಶಿಕ್ಷಕರ ವೇತನ ಪಾವತಿ ಸೇರಿದಂತೆ ಸರಕಾರದ ಆದೇಶದಂತೆ ಮಕ್ಕಳಿಂದ ಹೆಚ್ಚು ಶುಲ್ಕ ವಸೂಲಿ ಮಾಡದೇ ಸದ್ಯ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರಕಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲಾ ಆಡಳಿತದ ವಿಚಾರದಲ್ಲಿ ಮಧ್ಯೆಪ್ರವೇಶಿಸಿ ಕಿರುಕುಳ ನೀಡುತ್ತಿವೆ ಎಂದರು.
ಚಿಕ್ಕಮಗಳೂರು ತಾಲೂಕಿನಲ್ಲಿ 40 ಖಾಸಗಿ ಶಾಲೆಗಳು ಮಾನ್ಯತೆ ನವೀಕರಣಕ್ಕೆ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಇಲಾಖಾಧಿಕಾರಿಗಳು ಸಲ್ಲದ ಸಬೂಬು ಹೇಳುತ್ತಾ ಇನ್ನೂ ಮಾನ್ಯತೆಯನ್ನು ನವೀಕರಿಸಿಲ್ಲ. ಇದರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಸಮಸ್ಯೆಯಾಗಿದೆ. ಅಲ್ಲದೇ ಆರ್‍ಟಿಇ ಶುಲ್ಕ ಮರುಪಾವತಿ ಪಡೆಯಲು ಸಾಧ್ಯವಾಗದಂತಾಗಿದೆ. ಪರೀಕ್ಷೆಗೆ ನೋಂದಾಯಿಸಲು ಹಾಗೂ ಆರ್‍ಟಿಇ ಶುಲ್ಕ ಮರುಪಾವತಿಗೆ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣದ ಆದೇಶದ ಪ್ರತಿಯನ್ನು ಸಲ್ಲಿಸಬೇಕೆಂದು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಲಾಗಿದ್ದು, ಇದು 1983ರ ಶಿಕ್ಷಣ ಕಾಯ್ದೆ ಹಾಗೂ ಆರ್‍ಟಿಇ ಕಾಯ್ದೆಗೆ ವಿರುದ್ಧದ ನಿಲುವಾಗಿದೆ ಎಂದ ಅವರು, ಇಂತಹ ಆದೇಶವನ್ನು ಹಿಂಪಡೆದು ಮಾನ್ಯತೆ ನವೀಕರಣಕ್ಕೆ ಸರಕಾರ ಆದೇಶ ನೀಡಬೇಕೆಂದು ಆಗ್ರಹಿಸಿದರು.
ಅಗ್ನಿ ಅವಘಡ ಹಾಗೂ ಕಟ್ಟಡ ಸುರಕ್ಷತೆ ಹಾಗೂ ಮಕ್ಕಳ ರಕ್ಷಣೆಯ ಸುರಕ್ಷತೆ ವಿಚಾರವಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸರಕಾರದಿಂದ ಸೂಕ್ತ ನಿರ್ದೇಶನಗಳಿಲ್ಲದರಿರುವುದರಿಂದ ಅಧಿಕಾರಿಗಳು ಖಾಸಗಿ ಶಾಲೆಗಳನ್ನು ಹಣ ಸುಲಿಗೆಗೆ ಬಳಸಿಕೊಳ್ಳುತ್ತಿವೆ. ಈ ಸಂಬಂಧ ಶಿಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಮಾನ್ಯತೆ ನವೀಕರಣ ಹಾಗೂ ಎಸೆಸೆಲ್ಸಿ ಮಕ್ಕಳ ನೋಂದಣಿಗೆ ಮಕ್ಕಳ ಕನಿಷ್ಠ ಮಿತಿಯನ್ನು ತೆಗೆದು ಗರಿಷ್ಠ ಮಿತಿ ವಿಧಿಸಬೇಕೆಂದು ಒತ್ತಾಯಿಸಿದರು.
ಆರ್‍ಟಿಇ ಕಾಯ್ದೆಯಡಿಯಲ್ಲಿ ಖಾಸಗಿ ಶಾಲೆಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಕೆಲ ಸೀಟಿಗಳನ್ನು ಮೀಸಲಿಟ್ಟು ಶಿಕ್ಷಣ ನೀಡಲಾಗುತ್ತಿದೆ. ಆದರೆ ಆರ್‍ಟಿಇ ಅಡಿಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಶುಲ್ಕ ಮರುಪಾವತಿಗೆ ಖಾಸಗಿ ಶಾಲೆಗಳು ಸರಕಾರದ ಮುಂದೆ ಕೈಒಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಶುಲ್ಕ ಮರುಪಾವತಿಗೆ ಅಂತಿಮ ದಿನಾಂಕವನ್ನು ನಿಗದಿ ಮಾಡುವ ಪರಿಪಾಠವನ್ನು ಸರಕಾರ ಇತ್ತೀಚೆಗೆ ಮಾಡುತ್ತಿದ್ದು, ಅಂತಿಮ ದಿನಾಂಕ ನಿಗದಿ ಮಾಡುವುದನ್ನು ಕೈಬಿಡಬೇಕು ಹಾಗೂ ಆರ್‍ಟಿಇ ಮರುಪಾವತಿ ಅರ್ಜಿಗಳ ಪರಿಶೀಲನೆ ವಿವಿಧ ಹಂತದಲ್ಲಿ ಅಧಿಕಾರಿಗಳ ನೇಮಕವನ್ನು ಕೈಬಿಡಬೇಕೆಂದರು.
ಖಾಸಗಿ ಶಾಲೆಗಳ ಪಠ್ಯ ಕ್ರಮ, ಪಠ್ಯ ವಸ್ತು, ಪುಸ್ತಕಗಳ ಕುರಿತು ರಾಜ್ಯ ಸರಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ಶಿಕ್ಷಣ ಕಾಯ್ದೆಯಲ್ಲಿ ತಿಳಿಸಲಾಗಿದೆ. ಆದರೆ ಸದ್ಯ ಶಾಲೆಗಳಿಗೆ ಒದಗಿಸಲಾಗಿರುವ ಪಠ್ಯಪುಸಕ್ತಗಳ ಗುಣಮಟ್ಟ, ವಿಷಯ ಪ್ರಸ್ತಾವನೆ, ಕಾಗುಣಿತ ಸೇರಿದಂತೆ ಅನೇಕ ದೋಷಗಳಿದ್ದು, ಇದನ್ನು ಸರಕಾರ ಪರಿಗಣಿಸಬೇಕು. ಪಠ್ಯ ಪುಸ್ತಕಗಳಿಗಾಗಿ ಮುಂಗಡ ಹಣ ಸಲ್ಲಿಸುವ ಆದೇಶವನ್ನು ಹಿಂಪಡೆಯಬೇಕೆಂದ ಅವರು, ಶಾಲೆಗಳ ಸ್ಥಳಾಂತರ, ಹೆಸರು ಬದಲಾವಣೆ ಮತ್ತಿತರ ವಿಚಾರಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಶೋಷಣೆಯನ್ನು ತಪ್ಪಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶರತ್, ರಿಜ್ವಾನಾ, ಶಿವಾಚಾರ್ಯ, ಚಂದ್ರಶೇಖರ್, ನಂದಕುಮಾರ್ ಉಪಸ್ಥಿತರಿದ್ದರು.







