2023ರ ಜಿ20 ಶೃಂಗಸಭೆಗಾಗಿ ಸಚಿವಾಲಯ ಸ್ಥಾಪನೆಗೆ ಕೇಂದ್ರ ಸಂಪುಟದ ಅನುಮತಿ
ಹೊಸದಿಲ್ಲಿ,ಫೆ.16: ಮುಂದಿನ ವರ್ಷ ಭಾರತದಲ್ಲಿ ಜಿ20 ಶೃಂಗಸಭೆಯ ಆಯೋಜನೆಯ ವ್ಯವಹಾರಗಳನ್ನು ನೋಡಿಕೊಳ್ಳಲು ಸಚಿವಾಲಯವೊಂದನ್ನು ಸ್ಥಾಪಿಸುವ ಪ್ರಕ್ರಿಯೆಗೆ ಕೇಂದ್ರ ಸಂಪುಟವು ಮಂಗಳವಾರ ಚಾಲನೆ ನೀಡಿದೆ. ಭಾರತವು 2022,ಡಿಸೆಂಬರ್ 1ರಿಂದ 2023 ನವಂಬರ್ 30ರವರೆಗೆ ಜಿ20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಂಡು ಈ ಅಂತರರಾಷ್ಟ್ರೀಯ ಸಂಘಟನೆಯನ್ನು ಮುನ್ನಡೆಸಲಿದೆ. ಜಿ20 ಶೃಂಗಸಭೆಯೊಂದಿಗೆ ಅದರ ಅಧಿಕಾರಾವಧಿಯು ಅಂತ್ಯಗೊಳ್ಳಲಿದೆ. ವಾಡಿಕೆಯಂತೆ,ಭಾರತದ ಜಿ20 ಅಧ್ಯಕ್ಷತೆಗೆ ಸಂಬಂಧಿಸಿದಂತೆ ಮಾಹಿತಿ,ತಾಂತ್ರಿಕ,ಮಾಧ್ಯಮ,ಭದ್ರತೆ ಮತ್ತು ಲಾಜಿಸ್ಟಿಕ್ಸ್ ಅಂಶಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಜಿ20 ಸಚಿವಾಲಯವನ್ನು ಸ್ಥಾಪಿಸಲಾಗುತ್ತಿದೆ. ವಿದೇಶಾಂಗ ವ್ಯವಹಾರಗಳ,ವಿತ್ತ ಮತ್ತು ಇತರ ಸಂಬಂಧಿತ ಸಚಿವಾಲಯಗಳು/ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ವಿಷಯ ತಜ್ಞರು ಸಚಿವಾಲಯವನ್ನು ನೋಡಿಕೊಳ್ಳುತ್ತಾರೆ ಎಂದು ಸರಕಾರವು ಅಧಿಸೂಚನೆಯಲ್ಲಿ ತಿಳಿಸಿದೆ.
ಸಚಿವಾಲಯವು ಫೆಬ್ರವರಿ 2024ರವರೆಗೆ ಕಾರ್ಯ ನಿರ್ವಹಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ಹಾಗೂ ವಿತ್ತ,ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಶೃಂಗಸಭೆ ಆಯೋಜನೆಗೆ ಮಾರ್ಗದರ್ಶನ ನೀಡಲಿದ್ದಾರೆ. ಸಮಿತಿಯು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ ಗೋಯಲ್ ಅವರನ್ನೂ ಒಳಗೊಂಡಿರಲಿದೆ. ಹಾಲಿ ‘ಜಿ20 ಶೆರ್ಪಾ’ ಆಗಿರುವ ಗೋಯಲ್ ಜಿ20 ಮಟ್ಟದಲ್ಲಿ ಅಂತರರಾಷ್ಟ್ರೀಯ ಮಾತುಕತೆಗಳನ್ನು ನಡೆಸುತ್ತಿದ್ದಾರೆ.
ಜಿ20 ಸಚಿವಾಲಯವು ಬಹುಪಕ್ಷೀಯ ವೇದಿಕೆಗಳಲ್ಲಿ ಜಾಗತಿಕ ವಿಷಯಗಳ ಕುರಿತು ಭಾರತದ ನಾಯಕತ್ವಕ್ಕಾಗಿ ಜ್ಞಾನ ಮತ್ತು ಪರಿಣತಿ ಸೇರಿದಂತೆ ದೀರ್ಘಾವಧಿಯ ಸಾಮರ್ಥ್ಯ ನಿರ್ಮಾಣವನ್ನು ಸಾಧ್ಯವಾಗಿಸಲಿದೆ ಎಂದೂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







