ಉಜಿರೆ: ವೈದ್ಯರ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಹಿಜಾಬ್ ವಿರೋಧಿ ಟ್ವೀಟ್; ದೂರು

ಸಾಂದರ್ಭಿಕ ಚಿತ್ರ
ಬೆಳ್ತಂಗಡಿ, ಫೆ.16: ಉಜಿರೆಯ ಬೆನಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಶಂತನು ಆರ್. ಪ್ರಭು ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಹಿಜಾಬ್ ವಿರುದ್ಧ ಟ್ವೀಟ್ ಮಾಡಿರುವ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
ಹ್ಯಾಕರ್ಗಳು, ಹಿಜಾಬ್ ನಾವು ಬಯಸುವುದಿಲ್ಲ. ಹಿಜಾಬ್ ಹಾಕಲು ಇದು ತಾಲಿಬಾನ್ ಅಥವಾ ಸೌದಿ ಅರಬಿಯಾ ಅಲ್ಲ. ಮದ್ರಸವೂ ಅಲ್ಲ. ಇದು ಶಿಕ್ಷಣ ಸಂಸ್ಥೆ. ನಿಮಗೆ ಹಿಜಾಬ್ ಬೇಕಾದರೆ ಮದ್ರಸಕ್ಕೆ ಹೋಗಿ ಎಂಬಿತ್ಯಾದಿಯಾಗಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಲಿಫಾ ಶೈಖ್ ಎಂಬವರು ವಿರೋಧಿಸಿ ಪ್ರತ್ಯುತ್ತರ ನೀಡಿದ್ದು, ಅದರ ಸ್ಕ್ರೀನ್ ಶಾಟ್ ಮತ್ತು ವೈದ್ಯರು ಮಗುವೊಂದನ್ನು ಎತ್ತಿಕೊಂಡಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ ಎಂದು ಡಾ.ಶಂತನು ಆರ್. ಪ್ರಭು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆನಕ ಆಸ್ಪತ್ರೆಯ ವಿರುದ್ಧವೂ ಅಪಪ್ರಚಾರ: ಈ ನಡುವೆ ಹಿಜಾಬ್ ವಿರುದ್ಧದ ಈ ಟ್ವೀಟನ್ನು ಬಳಸಿಕೊಂಡು ಡಾ.ಶಂತನು ಆರ್. ಪ್ರಭು ಕರ್ತವ್ಯದಲ್ಲಿರುವ ಬೆನಕ ಆಸ್ಪತ್ರೆಯ ಬಗ್ಗೆಯೂ ಅಪ ಪ್ರಚಾರ ಮಾಲಾಗುತ್ತಿದೆ ಎಂದವರು ದೂರಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಶಂತನು ಪ್ರಭು, ‘‘ನಾನು ಯೆನೆಪೊಯ ವೈದ್ಯಕೀಯ ಕಾಲೇಜಿನಲ್ಲಿ ಕಲಿತಿದ್ದು ನನಗೆ ಹಿಜಾಬ್ ಬಗ್ಗೆ ಗೊತ್ತಿದೆ. ನನ್ನ ಟ್ವಿಟರ್ ಖಾತೆ ಹ್ಯಾಕ್ ಮಾಡಿ ನನ್ನ ಹೆಸರು ಕೆಡಿಸಲು ಯಾರೋ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದೇನೆ’’ ಎಂದಿದ್ದಾರೆ.