ಇಸ್ರೇಲ್ ಪ್ರಧಾನಿಯ ಐತಿಹಾಸಿಕ ಬಹ್ರೈನ್ ಭೇಟಿ ಅಂತ್ಯ

ಮನಾಮ, ಫೆ.16: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರ 2 ದಿನಗಳ ಐತಿಹಾಸಿಕ ಬಹ್ರೈನ್ ಭೇಟಿ ಕಾರ್ಯಕ್ರಮ ಮಂಗಳವಾರ ಅಂತ್ಯಗೊಂಡಿದ್ದು ಉಭಯ ದೇಶಗಳು ಪರಸ್ಪರ ಸಹಕಾರ ಸಂಬಂಧ ವೃದ್ಧಿಗೊಳಿಸುವ ಸಂಕಲ್ಪ ಮಾಡಿವೆ ಎಂದು ಬಹ್ರೈನ್‌ನ ಬಿಎನ್‌ಎ ಸುದ್ಧಿಸಂಸ್ಥೆ ವರದಿ ಮಾಡಿದೆ.
ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ಉದ್ದೇಶದಿಂದ 2020ರಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿ ಇಸ್ರೇಲ್ ಪ್ರಧಾನಿ ಬೆನೆಟ್ ಬಹ್ರೈನ್ ರಾಜಧಾನಿ ಮನಾಮಕ್ಕೆ ಭೇಟಿ ನೀಡಿದರು. ಮನಾಮದಲ್ಲಿ ಅಮೆರಿಕದ ನೌಕಾಪಡೆಯ ನೌಕಾನೆಲೆಯ ಸಹಿತ ಹಲವು ಅಂತರಾಷ್ಟ್ರೀಯ ನೌಕಾನೆಲೆಗಳಿವೆ.
ಮಂಗಳವಾರ ಬಹ್ರೈನ್‌ನ ದೊರೆ ಹಮದ್ ಜತೆ ಮಾತುಕತೆ ನಡೆಸಿದ ಬೆನ್ನೆಟ್, ಪರಮಾಣು ಬೆದರಿಕೆ, ಭಯೋತ್ಪಾದಕರ ಚಟುವಟಿಕೆ, ಧಾರ್ಮಿಕ ತೀವ್ರವಾದ, ಬಡತನ, ಸಾಮಾಜಿಕ ಸಮಸ್ಯೆಗಳ ಸಹಿತ ಪ್ರಾದೇಶಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವಿನ ತಂತ್ರಗಾರಿಕೆಯ ಮತ್ತು ಭದ್ರತಾ ಸಂಬಂಧವನ್ನು ಬಲಪಡಿಸುವ ಕುರಿತು ಚರ್ಚಿಸಿದರು. ಶಾಂತಿಯನ್ನು ಭದ್ರಪಡಿಸಲು ಮತ್ತು ಸಮೃದ್ಧಿಯನ್ನು ಸಾಧಿಸಲು ಉಭಯ ದೇಶಗಳ ನಡುವೆ ನಾಗರಿಕ, ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಗಿದೆ ಎಂದು ವರದಿ ಹೇಳಿದೆ.
ಉಭಯ ದೇಶಗಳ ಉತ್ತಮ ಹಿತಾಸಕ್ತಿಯನ್ನು ಸಾಧಿಸುವ ಸಂಯೋಜಿತ ಜಂಟಿ ಪ್ರಯತ್ನದ ಕುರಿತು ಬೆನೆಟ್ ಅವರ ದೃಢನಿಲುವು ಮತ್ತು ನಾಯಕತ್ವದ ಕಾರಣದಿಂದಾಗಿ ಇಸ್ರೇಲ್ ಪ್ರಧಾನಿಯ ಭೇಟಿ ಫಲಪ್ರದ ಮತ್ತು ಯಶಸ್ವಿಯಾಗಿದೆ ಎಂದು ದೊರೆ ಹಮದ್ ಹೇಳಿದ್ದಾರೆ. ಬಹ್ರೈನ್‌ಗೆ ನೀಡಿದ ಭೇಟಿಯು ಇರಾನ್ ವಿರುದ್ಧ ಹಾಗೂ ಹೌದಿ ಸೇರಿದಂತೆ ಅದರ ಮಿತ್ರರ ವಿರುದ್ಧದ ಸಾಮಾನ್ಯ ನಿಲುವನ್ನು ರೂಪಿಸುವ ಅವಕಾಶವಾಗಿದೆ ಎಂದು ಬೆನೆಟ್ ಪ್ರತಿಕ್ರಿಯಿಸಿದ್ದಾರೆ. ಭಯೋತ್ಪಾದನೆ ಮತ್ತು ದೊಂಬಿಯನ್ನು ಉತ್ತೇಜಿಸುವ ಶತ್ರುಗಳ ವಿರುದ್ಧ ಸೌಮ್ಯ ದೇಶಗಳ ಹೊಸ ಪ್ರಾದೇಶಿಕ ವ್ಯವಸ್ಥೆಯನ್ನು ರೂಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.







