ಧರ್ಮಛತ್ರಗಳಾಗಿರುವ ಬಿಬಿಎಂಪಿ ವಾಣಿಜ್ಯ ಮಳಿಗೆಗಳು
ಮಾನ್ಯರೇ,
ಬಿಬಿಎಂಪಿಯಲ್ಲಿ ವಾಣಿಜ್ಯ ಮಳಿಗೆಗಳ ವ್ಯವಹಾರವನ್ನು ನೋಡಿಕೊಳ್ಳುವ ಸಲುವಾಗಿ ಅಧಿಕಾರಿಯನ್ನು ನೇಮಕ ಮಾಡಿರುತ್ತಾರೆ. ಮಾರುಕಟ್ಟೆಗಳ ಉಸ್ತುವಾರಿಗಾಗಿ ಹಲವಾರು ಸಿಬ್ಬಂದಿಯೂ ಇದ್ದಾರೆ. ಬಿಬಿಎಂಪಿ ನಿರ್ಮಿಸಿರುವ ನೂರಾರು ವಾಣಿಜ್ಯ ಮಳಿಗೆಗಳು ಇಂದು ಧರ್ಮಛತ್ರಗಳಾಗಿ ರಾತ್ರಿಯ ವೇಳೆಯಲ್ಲಿ ಭಿಕ್ಷುಕರು ಮತ್ತು ಪಾನಮತ್ತರು ಆಶ್ರಯಪಡೆದುಕೊಳ್ಳುವ ತಾಣವಾಗಿದೆ. ಅನೇಕ ಮಳಿಗೆಗಳಲ್ಲಿ ಶೇ. 50ರಷ್ಟು ಬಾಗಿಲು ಹಾಕಿ ಹಲವಾರು ವರ್ಷಗಳಾಗಿವೆ. ಬಾಗಿಲು ತೆರೆದುಕೊಂಡಿರುವ ಅಂಗಡಿಯವರು ಅವ್ಯವಸ್ಥೆಯ ಆಗರವಾಗಿರುವ ವಾಣಿಜ್ಯ ಮಳಿಗೆಗಳಲ್ಲಿ ಬೇಸರದಿಂದಲೇ ವ್ಯವಹಾರ ನಡೆಸುತ್ತಿದ್ದಾರೆ. ಇಂತಹ ಹಲವಾರು ಮಳಿಗೆಗಳಲ್ಲಿ ಒಂದು ವರ್ಷದಿಂದ ಹಿಡಿದು ಆರು ವರ್ಷದ ತನಕ ಬಾಡಿಗೆ ಕಟ್ಟದೆ ಬಾಗಿಲು ಹಾಕಿಕೊಂಡಿರುವ ಅಂಗಡಿಗಳು ಸಾಕಷ್ಟು ಇವೆ. ಈ ಅಂಗಡಿಗಳ ಮೇಲೆ ಬಿಬಿಎಂಪಿಯ ನೋಟಿಸ್‌ಗಳು ರಾರಾಜಿಸುತ್ತಿದೆ. ಬಾಡಿಗೆಯೂ ಬರುತ್ತಿಲ್ಲ, ಬಾಗಿಲು ಕೂಡಾ ತೆಗೆಯುತ್ತಿಲ್ಲ. ಬಿಬಿಎಂಪಿ ಮಾರುಕಟ್ಟೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಬಿಬಿಎಂಪಿ ನಷ್ಟವನ್ನು ಅನುಭವಿಸುತ್ತಿದೆ. ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರ ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ವಾಣಿಜ್ಯ ಮಳಿಗೆಗಳ ಸ್ಥಿತಿಗತಿಯನ್ನೊಮ್ಮೆ ನೋಡಿದರೆ ಬಿಬಿಎಂಪಿಯ ಆಡಳಿತ ವೈಖರಿ ಕಣ್ಣಿಗೆ ಬೀಳುತ್ತದೆ. ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಬಾಡಿಗೆದಾರರ ಮೇಲೆ ಮೊಕದ್ದಮೆಗಳನ್ನು ಹೂಡಿ ಬಾಗಿಲು ಬಡಿದುಕೊಂಡು ಬಿದ್ದಿರುವುದಕ್ಕಿಂತ ಅಂತಹ ಪ್ರಕರಣಗಳ ಬಗ್ಗೆ ಗಮನಹರಿಸಿ ಬಾಡಿಗೆ ವಸೂಲು ಆಗಿದ್ದಿದ್ದರೆ ಕಡೆಯ ಪಕ್ಷದ ನ್ಯಾಯಾಲಯದ ಅನುಮತಿ ತಂದು ಅಂಗಡಿಗಳನ್ನು ತೆರೆದು ಬೇರೆಯವರಿಗೆ ಬಾಡಿಗೆಗೆ ಕೊಡಬಹುದು. ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೆ ತಮ್ಮ ಪಾಡಿಗೆ ತಾವು ಇರುವುದರಿಂದ ಬಿಬಿಎಂಪಿ ಮಳಿಗೆಗಳು ಹಾಳುಕೊಂಪೆಯಾಗಿದೆ.





