ತುಂಬೆ ಸಹಿತ ವಿವಿಧ ರೇಚಕ ಸ್ಥಾವರ ಪರಿಶೀಲಿಸಿದ ಮೇಯರ್

ಮಂಗಳೂರು, ಫೆ.17: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆಯಾ ಗುತ್ತಿರುವ ತುಂಬೆ ಹಾಗೂ ವಿವಿಧ ರೇಚಕ ಸ್ಥಾವರಗಳ ದುರಸ್ತಿ ಕಾರ್ಯವನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಗುರುವಾರ ಪರಿಶೀಲನೆ ನಡೆಸಿದರು.
ಪ್ರಸ್ತುತ ತುಂಬೆಯಲ್ಲಿರುವ 18 ಎಂಜಿಡಿ ರೇಚಕ ಸ್ಥಾವರವನ್ನು ಶಟ್‌ಡೌನ್ ಮಾಡಲಾಗಿದೆ. ಅಲ್ಲದೆ ಜ್ಯಾಕ್‌ವೆಲ್‌ನಲ್ಲಿ 425 ಎಚ್.ಪಿ ಸಾಮರ್ಥ್ಯದ ಪಂಪ್ ನಂ.3ನ್ನು ಅಳವಡಿಸುವ ಕಾಮಗಾರಿಯು ಕುಡ್ಸೆಂಪ್ ವತಿಯಿಂದ ಕೈಗೊಳ್ಳಲಾಗಿದೆ. ಕೊಟ್ಟಾರ ಚೌಕಿಯ ತಂಡರ್ ಫೋರ್ಸ್ ಮೋಟರ್ಸ್ ಬಳಿ 900 ಎಂಎಂ ವ್ಯಾಸದ ಎಂಎಸ್ ಕೊಳವೆಯ ದುರಸ್ಥಿ ಕಾಮಗಾರಿಯು ಚಾಲ್ತಿಯಲ್ಲಿದೆ. ಸುಮಾರು 2 ಕಿ.ಮೀವರೆಗಿನ ಈ ಕೊಳವೆಯು ರಾಜಕಾಲುವೆಯಲ್ಲಿದ್ದು, ಮುಂದೆ ಕುಡ್ಸೆಂಪ್ ವತಿಯಿಂದ ರಾಜಕಾಲುವೆಯಿಂದ ಸ್ಥಳಾಂತರಿಸಲು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿಗಾಗಿ ಶುಲ್ಕ ಪಾವತಿಸಲಾಗಿರುತ್ತದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಮಾಹಿತಿ ನೀಡಿದ್ದಾರೆ.
ರಾ.ಹೆ. ಇಲಾಖೆಯಿಂದ ಅನುಮತಿ ದೊರಕಿದ ತಕ್ಷಣ ಸ್ಥಳಾಂತರದ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಇದರಿಂದ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳಲಾಗುವುದು. ಕೊಟ್ಟಾರ ಚೌಕಿ ಸುಪರ್ ಸ್ಟೀಲ್ ಬಳಿ 900 ಎಂಎಂ ಕೊಳವೆಯನ್ನು ದುರಸ್ತಿಪಡಿಸುವ ಕಾರ್ಯವು ಜ್ಯಾಕ್‌ವೆಲ್ ಇದ್ದ ಕಾರಣ ಕೈಗೊಳ್ಳಲಾಗಿ ರಲಿಲ್ಲ. ಇದೀಗ ಈ ಕಾಮಗಾರಿಯನ್ನು ಮಾಡಲಾಗುತ್ತದೆ. ಪಣಂಬೂರು ರೇಚಕ ಸ್ಥಾವರದಲ್ಲಿFull Bore Bulk Flow Meterಅಳವಡಿಕೆ ಕಾಮಗಾರಿಯು ಕುಡ್ಸೆಂಪ್ ವತಿಯಿಂದ ಕೈಗೊಳ್ಳಲಾಗಿದೆ. ಈ ಮಾಪಕದಿಂದ ಎಷ್ಟು ನೀರಿನ ಪ್ರಮಾಣ ಒಳ ಹರಿಯುವುದು ಎನ್ನುವ ಮಾಹಿತಿ ತಿಳಿಯುತ್ತದೆ. ಈ ಮಾಪಕವನ್ನು ಮುಂದೆ ಬೆಂದೂರು, ತುಂಬೆ ರೇಚಕ ಸ್ಥಾವರಗಳಲ್ಲಿ ಹಾಗೂ ಕಣ್ಣೂರಿನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಬೆಂದೂರ್ ರೇಚಕ ಸ್ಥಾವರದ ಕೆಳಮಟ್ಟದ ಸಂಪುಗಳನ್ನು ಶುಚಿಗೊಳಿಸಲಾಗುತ್ತಿದೆ ಎಂದು ಮೇಯರ್ ತಿಳಿಸಿದ್ದಾರೆ.