ಮಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ಫೆ.17: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಗುರುವಾರ ನಗರದ ಹಂಪನಕಟ್ಟೆಯಿಂದ ಕ್ಲಾಕ್ ಟವರ್‌ವರೆಗೆ ಮೆರವಣಿಗೆ ಹಾಗೂ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನರ್ಹ. ತಕ್ಷಣ ಅವರು ರಾಜೀನಾಮೆ ನೀಡಬೇಕು. ಈಶ್ವರಪ್ಪ ಹಿರಿಯ ನಾಯಕರಾಗಿದ್ದುಕೊಂಡು ಎಲುಬಿಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇಶದ ಬಗ್ಗೆ ಅವರಿಗೆ ಎಷ್ಟು ಅಭಿಮಾನವಿದೆ ಎಂಬುದು ಅವರ ಮಾತಿನಲ್ಲಿ ಜಗಜ್ಜಾಹೀರಾಗಿದೆ. ಮುಖ್ಯಮಂತ್ರಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಈಶ್ವರಪ್ಪರ ಪ್ರತಿಕೃತಿಯನ್ನು ದಹಿಸಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ತಡೆದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಜೆ.ಅಬ್ದುಲ್ ಸಲೀಂ, ಮುಹಮ್ಮದ್ ಕುಂಜತ್ತಬೈಲ್, ಸವಾದ್ ಸುಳ್ಯ, ಪ್ರಕಾಶ್ ಸಾಲ್ಯಾನ್, ಟಿ.ಕೆ.ಸುಧೀರ್, ಶುಭೋದಯ ಆಳ್ವ, ನವೀನ್ ಡಿಸೋಜ, ಎ.ಸಿ.ವಿನಯರಾಜ್, ವಿಶ್ವಾಸ್ ಕುಮಾರ್‌ದಾಸ್, ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ, ಸಬಿತಾ ಮಿಸ್ಕಿತ್, ಟಿ.ಕೆ.ಶೈಲಜಾ, ಗಣೇಶ್ ಪೂಜಾರಿ, ಯು.ಎಚ್.ಖಾಲಿದ್, ಸಿ.ಎಂ ಮುಸ್ತಫಾ, ಸಂಶುದ್ದೀನ್ ಝೀನತ್ ಬಂದರ್, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್, ನಝೀರ್ ಬಜಾಲ್, ನೀರಜ್ ಪಾಲ್, ರಮಾನಂದ ಪೂಜಾರಿ, ಅಲಿಸ್ಟರ್ ಡಿಕುನ್ಹ, ಗಿರೀಶ್ ಆಳ್ವ, ರಾಕೇಶ್ ದೇವಾಡಿಗ, ಸುನಿಲ್ ಕುಮಾರ್ ಪೂಜಾರಿ, ಸೌಹಾನ್ ಎಸ್.ಕೆ, ಹಸನ್ ಫಳ್ನೀರ್ ಪಾಲ್ಗೊಂಡಿದ್ದರು.