ಉಡುಪಿ: 35ಕ್ಕಿಳಿದ ಕೊರೋನ ಪಾಸಿಟಿವ್ ಸಂಖ್ಯೆ, ಒಬ್ಬರು ಮೃತ್ಯು
ಉಡುಪಿ, ಫೆ.17: ಜಿಲ್ಲೆಯಲ್ಲಿ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ಗುರುವಾರ 35ಕ್ಕೆ ಇಳಿದಿದೆ. ಇಂದು ಕುಂದಾಪುರದ 89 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ದಿನದಲ್ಲಿ 78 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 329ಕ್ಕೆ ಇಳಿದಿದೆ.
ಕೋವಿಡ್ ಗುಣಲಕ್ಷಣಗಳನ್ನು ಹೊಂದಿದ್ದು, ಇತರ ಕೆಲವು ದೈಹಿಕ ಸಮಸ್ಯೆ ಹೊಂದಿದ್ದ ಕುಂದಾಪುರದ 89 ವರ್ಷ ಹಿರಿಯರನ್ನು ಫೆ.3ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಫೆ.7ರಂದು ಮೃತಪಟ್ಟರು. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 539ಕ್ಕೇರಿದೆ.
ಇಂದು ಪಾಸಿಟಿವ್ ಬಂದ 35 ಮಂದಿಯಲ್ಲಿ 27 ಮಂದಿ ಪುರುಷರು ಹಾಗೂ ಎಂಟು ಮಂದಿ ಮಹಿಳೆಯರು. ಇವರಲ್ಲಿ 24 ಮಂದಿ ಉಡುಪಿ ತಾಲೂಕಿಗೆ, ಮೂವರು ಕುಂದಾಪುರ, ಐವರು ಕಾರ್ಕಳ ತಾಲೂಕಿಗೆ ಸೇರಿ ದವರು. ಉಳಿದ ಮೂವರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 30 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಈಗ 40ಕ್ಕಿಳಿದಿದೆ.
ಬುಧವಾರ 78 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 17986ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1162 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,219ಕ್ಕೇರಿದೆ.
2604 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 2604 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 199 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 247 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಉಳಿದಂತೆ 496 ಮಂದಿ ಮೊದಲ ಡೋಸ್ ಹಾಗೂ 1861 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 24 ಮಂದಿ ಮೊದಲ ಡೋಸ್ ಹಾಗೂ 914 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.