ರಾಜ್ಯದ ಮಾನ ಹರಾಜು ಮಾಡಿದ ಶಾಸಕ ರಘುಪತಿ ಭಟ್ ರಾಜೀನಾಮೆ ನೀಡಲಿ: ಅಬ್ದುಲ್ ಮಜೀದ್

ಉಡುಪಿ, ಫೆ.17: ಉಡುಪಿಯಲ್ಲಿನ ಈ ಸಣ್ಣ ಹಿಜಾಬ್ ಪ್ರಕರಣವನ್ನು ಉಡುಪಿ ಶಾಸಕ ರಘುಪತಿ ಭಟ್ ಸೌಹಾರ್ದಯುತವಾಗಿ ಬಗೆಹರಿಸುವ ಬದಲು ಹಠಕ್ಕೆ ಬಿದ್ದು ಮುಸ್ಲಿಮ್ ಧ್ವೇಷದಿಂದ ವಿವಾದವನ್ನಾಗಿ ಮಾಡಿದ್ದಾರೆ. ರಾಜ್ಯದ ಸೌಹಾರ್ದ, ಶಾಂತಿಯ ವಾತಾವರಣವನ್ನು ಕದಡಿ, ಕರ್ನಾಟಕದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿರುವ ರಘುಪತಿ ಭಟ್ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಾದಕ್ಕೆ ರಘುಪತಿ ಭಟ್ ಅವರೇ ನೇರ ಕಾರಣಕರ್ತರು. ಈ ಮೂಲಕ ಬಿಜೆಪಿ ಸರಕಾರಕ್ಕೆ ಬಸಿ ಬಳಿಯುವ ಕೆಲಸ ಮಾಡಿರುವ ಮತ್ತು ರಾಜ್ಯದ ಮಾನ ಹರಾಜು ಮಾಡಿರುವ ಶಾಸಕರ ರಾಜೀನಾಮೆಯನ್ನು ಮುಖ್ಯಮಂತ್ರಿ ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ ಮೆಟ್ಟಿಲೇರಿರುವ ಮಕ್ಕಳಿಗೆ ತರಬೇತಿ ನೀಡಲಾಗಿದೆ ಎಂಬ ಹೇಳಿಕೆ ನೀಡಿರುವ ರಘುಪತಿ ಭಟ್ಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ. ನಮ್ಮ ಮಕ್ಕಳಿಗೆ ಹಿಜಾಬ್ ಬಗ್ಗೆ ಮದರಸ ಮತ್ತು ಪೋಷಕರೇ ಹೇಳಿ ಕೊಡುತ್ತಾರೆ. ಅದಕ್ಕೆ ಯಾವುದೇ ತರಬೇತಿ ಅಗತ್ಯ ಇಲ್ಲ. ರಘುಪತಿ ಭಟ್ರ ಪಲ್ಲಂಗದ ಆಟವನ್ನು ನಾವು ನೋಡಿದ್ದೇವೆ. ಹಾಗಾಗಿ ಅವರಿಗೆ ಎಸ್ಡಿಪಿಐಗೆ ಹೇಳುವ ಯಾವುದೇ ನೈತಿಕ ಹಕ್ಕಿಲ್ಲ. ನಾವು ಪ್ರಬುದ್ಧ ರಾಜಕೀಯ ಮಾಡುತ್ತೇವೆ ಹೊರತು ಅವರ ಹಾಗೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಟ ಆಡಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಅವರು ಟೀಕಿಸಿದರು.
ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಶಾಲೆ ಮತ್ತು ಪದವಿ ಕಾಲೇಜಿಗಳಲ್ಲಿ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರನ್ನು ಗೇಟಿ ನಲ್ಲಿ ತಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಸರಕಾರದ್ದು ಮುಸ್ಲಿಮ್ ವಿರೋಧಿ ಅಜೆಂಡಾ. ಆದುದರಿಂದ ಅವರು ಕೋರ್ಟ್ ಆದೇಶವನ್ನು ಅವರಿಗೆ ಬೇಕಾದ ರೀತಿಯಲ್ಲಿ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.
ಆದುದರಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ ತಾನು ನೀಡಿದ ಆದೇಶದ ಬಗ್ಗೆ ಸರಕಾರಕ್ಕೆ ಸ್ಪಷ್ಟವಾದ ನಿರ್ದೇಶನವನ್ನು ನೀಡಬೇಕು. ಯಾಕೆಂದರೆ ಈ ಸರಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಈ ವಿವಾದಕ್ಕೆ ಬಿಜೆಪಿ ಸರಕಾರವೇ ನೇರ ಕಾರಣ. ಕೋರ್ಟ್ನ ಆದೇಶವನ್ನು ರಾಜ್ಯ ಸರಕಾರ ಉಲ್ಲಂಘಿಸುತ್ತಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಉಡುಪಿ ಕ್ಷೇತ್ರ ಅಧ್ಯಕ್ಷ ಸಾದಿಕ್ ಉಪಸ್ಥಿತರಿದ್ದರು.