ವಸತಿ ಶಾಲೆಗಳಲ್ಲಿ ಹಿಜಾಬ್ ನಿಷೇಧ ನಿಗೂಢ ಷಡ್ಯಂತ್ರದ ಭಾಗ: ಎಸ್ವೈಎಸ್

ಎಮ್ಮೆಸ್ಸೆಂ ಝೈನೀ ಕಾಮಿಲ್
ಮಂಗಳೂರು : ಕರ್ನಾಟಕದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಗಳ ಅಧೀನದಲ್ಲಿ ಬರುವ ವಸತಿ ಶಾಲೆಗಳಲ್ಲಿ ಕೂಡ ಹೆಣ್ಮಕ್ಕಳ ಶಿರವಸ್ತ್ರ (ಹಿಜಾಬ್) ನಿಷೇಧಿಸುವ ಸುತ್ತೋಲೆಯು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು, ತಕ್ಷಣವೇ ಇದನ್ನು ಹಿಂದಿಗೆಯಬೇಕೆಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಆಗ್ರಹಿಸಿದೆ.
ಪ್ರಸ್ತುತ ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರ ಪೈಕಿ ಶೇ.98ಕ್ಕಿಂತ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ. ಅಲ್ಲದೆ ದಿನ ಪೂರ್ತಿ ಅಲ್ಲೇ ವಾಸವಾಗಿರುತ್ತಾರೆ. ಈ ವೇಳೆ ಅವರಿಗೆ ಧಾರ್ಮಿಕವಾಗಿ ಕಡ್ಡಾಯವಾಗಿರುವ ವಸ್ತ್ರಧಾರಣೆಯನ್ನು ಬಿಟ್ಟಿರಲು ಸಾಧ್ಯವಿಲ್ಲ. ಹಿಜಾಬ್ಗೆ ನಿಷೇಧ ಹೇರಿದರೆ ಮುಸ್ಲಿಂ ಹೆಣ್ಣು ಮಕ್ಕಳು ವಸತಿ ಶಾಲೆ ತೊರೆಯಲು ಕಾರಣವಾಗಲಿದೆ. ಆಗ ವಿದ್ಯಾರ್ಥಿನಿಗಳಿಲ್ಲದ ನೆಪವೊಡ್ಡಿ ಸಂಸ್ಥೆಯನ್ನೇ ಮುಚ್ಚುವ ನಿಗೂಢ ತಂತ್ರ ಇದರ ಹಿಂದೆ ಇದೆಯೇ ಎಂಬ ಸಂದೇಹ ಕಾಡುತ್ತಿದೆ.
ನಿಜಕ್ಕೂ ಸರ್ಕಾರವು ಅಲ್ಪಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿದ್ದೇ ಆದಲ್ಲಿ ತಕ್ಷಣ ಪ್ರಸ್ತುತ ಆದೇಶವನ್ನು ಹಿಂಪಡೆಯಬೇಕು. ಅಲ್ಪಸಂಖ್ಯಾತರ ಕಲ್ಯಾಣ ನಿಧಿ ಮತ್ತು ಮುಸ್ಲಿಮರಿಗೇ ಸೇರಿರುವ ವಕ್ಫ್ ಆಸ್ತಿಯಿಂದ ಅಲ್ಪಸಂಖ್ಯಾತರ ವಿದ್ಯಾಭ್ಯಾಸಕ್ಕಾಗಿ ಹಿಂದಿನ ಸರ್ಕಾರಗಳು ಈ ಸಂಸ್ಥೆಗಳನ್ನು ಸ್ಥಾಪಿಸಿದ್ದು ಅವುಗಳನ್ನು ಎಂದಿನಂತೆ ಸುಗಮವಾಗಿ ನಡೆಯಲು ಬಿಡಬೇಕು. ಅಲ್ಲಿರುವ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಬಾರದು. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆ ಸಚಿವರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿನಂತಿಸಿದ್ದಾರೆ.