ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾಯಕ ಸಮಾಜದಿಂದ ವಿಧಾನಸೌಧ ಚಲೋ

ಬೆಂಗಳೂರು, ಜ.17: ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಹಾಗೂ ಈ ಬಾರಿಯ ಬಜೆಟ್‍ನಲ್ಲಿ ಅನುದಾನವನ್ನು ಮೀಸಲಿಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಾಯಕ ಸಮಾಜದ ಸಮಾನ ಮನಸ್ಕರು ಗುರುವಾರದಂದು ವಿಧಾನ ಸೌಧ ಚಲೋ ನಡೆಸಿದರು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು, ಫ್ರೀಡಂ ಪಾರ್ಕ್ ಬಳಿಯ ಮಹಾರಾಣಿ ಕಾಲೇಜು ಸರ್ಕಲ್‍ವರೆಗೆ ಬೃಹತ್ ಮೆರವಣಿಗೆ ನಡೆಸಿದರು.
ನಾಯಕ ಸಮಾಜದ ಸಮಾನ ಮನಸ್ಕರು ಹಾಗೂ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಮಾತನಾಡಿ, ರಾಜ್ಯ ಸರಕಾರವು ಸಮುದಾಯಕ್ಕೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಶೇ.7.5 ಮೀಸಲಾತಿ ಜಾರಿಗೊಳಿಸುವಂತೆ ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಸಿದ್ದಾರೆ. ಆದರೆ ವರದಿ ಜಾರಿಗೊಳಿಸುತ್ತೇವೆ ಎಂದು ಸುಳ್ಳು ಹೇಳಿರುವ ರಾಜ್ಯ ಸರಕಾರ, ಇದುವರೆಗೂ ಕೊಟ್ಟ ಮಾತಿಗೆ ತಪ್ಪಿ ವಚನಭ್ರಷ್ಟವಾಗಿದೆ ಎಂದು ಕಿಡಿ ಕಾರಿದ್ದಾರೆ.
ಹಿಂದಿನ ಬಜೆಟ್‍ನಲ್ಲಿ ವಾಲ್ಮೀಕಿ ಸಮುದಾಯಕ್ಕಾಗಿ ಮೀಸಲಿಟ್ಟಿದ್ದ ಹಣದಲ್ಲಿ ಶೇ.70ರಷ್ಟು ಅನುದಾನವನ್ನು ಪುನಃ ಸೇರಿಸಿ ಈ ಬಾರಿಯ ಬಜೆಟ್ ಮಂಡನೆ ಮಾಡಬೇಕು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಡೀ ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗುತ್ತಿದ್ದು, ಇದಕ್ಕೆ ಸರಕಾರ ತಕ್ಷಣ ಸೂಕ್ತ ಕ್ರಮ ಕೈಗೊಂಡು ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ತಡೆಯಬೇಕು. ಆದರೆ ಅದು ಬಿಟ್ಟು ಸರಕಾರ ಈಗ ತಳವಾರ, ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಸರಕಾರವು ಸ್ಪಷ್ಟಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು, ತುಮಕೂರಿನ ಭರತ್, ಜಯಸಿಂಹ, ಮಾರಣ್ಣ ಪಾಳೇಗಾರ, ಕುಪ್ಪೂರು ಶ್ರೀಧರ್, ಸಿಂಹ ಘರ್ಜನೆ ವೇದಿಕೆಯ ಮಾಲೂರು ವೆಂಕಟೇಶ್, ಪರಶುರಾಮ್, ಭಾರತಿ, ರಾಯಚೂರಿನ ಶರಣಬಸಪ್ಪ, ರಜನಿ ಎಂ.ಆರ್., ನೆಲಮಂಗಲದ ಅಶೋಕ್, ರವಿ ವಾಲ್ಮೀಕಿ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮುಖಂಡರು ಭಾಗವಹಿಸಿದ್ದರು.
ಪರಿಶಿಷ್ಟ ಪಂಗಡ ಸಮುದಾಯದ ಆದಿಕವಿ, ವಾಲ್ಮೀಕಿ ಸೃಷ್ಟಿಸಿದ ರಾಮನನ್ನು ಇಡೀ ಜಗತ್ತು ಪೂಜಿಸುತ್ತಿರಬೇಕಾದರೆ, ರಾಮನನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಹಾಗಾಗಿ ಅಯೋಧ್ಯೆಯ ರಾಮಮಂದಿರದ ಎದುರು ವಾಲ್ಮೀಕಿ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು.
-ರಮೇಶ್ ಹಿರೇಜಂಬೂರು, ರಾಜ್ಯಾಧ್ಯಕ್ಷ, ಕರ್ನಾಟಕ ನಾಯಕರ ಒಕ್ಕೂಟ







.jpg)
.jpg)

