ಐದು ವರ್ಷಗಳಲ್ಲಿ ತುಂಬೆಯಲ್ಲಿ ಇನ್ನಷ್ಟು ಬದಲಾವಣೆ: ತುಂಬೆ ಮೊಯ್ದಿನ್
ಮುಹಿಯುದ್ದೀನ್ ಜುಮಾ ಮಸೀದಿ ಉದ್ಘಾಟನೆ

ಬಂಟ್ವಾಳ, ಫೆ.17: ಶಿಕ್ಷಣ ಸಹಿತ ತುಂಬೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಎಷ್ಟು ಕಷ್ಟವಾದರೂ ಅದನ್ನು ಮಾಡಿ ಮುಗಿಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ನೀವು ತುಂಬೆಯಲ್ಲಿ ಬದಲಾವಣೆ ಕಾಣಲಿದ್ದೀರಿ ಎಂದು ತುಂಬೆ ಗ್ರೂಪ್ ಯುಎಇ ಸಂಸ್ಥಾಪಕ ತುಂಬೆ ಮೊಯ್ದಿನ್ ಹೇಳಿದರು.
ತನ್ನ ಸ್ವಂತ ಖರ್ಚಿನಿಂದ ತುಂಬೆಯಲ್ಲಿ ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕೃತಗೊಳಿಸಿರುವ ಮುಹಿಯುದ್ದೀನ್ ಜುಮಾ ಮಸೀದಿಯನ್ನು ಗುರುವಾದ ಉದ್ಘಾಟಿಸಿ ಬಳಿಕ ನಡೆದ ಸರಳ ಸಮಾರಂಭವನ್ನು ದ್ದೇಶಿಸಿ ಅವರು ಮಾತನಾಡಿದರು.
ಈ ಜಮಾಅತಿನ ಜನರು ಬಯಸಿದ್ದ ಸುಸಜ್ಜಿತವಾದ ಮಸೀದಿ ಅಲ್ಲಾಹನ ಅಪಾರವಾದ ಅನುಗ್ರಹದಿಂದ ಇಂದು ಉದ್ಘಾಟನೆಯಾಗಿದೆ. ಇಲ್ಲಿ ಈ ಹಿಂದೆ ನನ್ನ ತಂದೆ ಬಿ.ಅಹ್ಮದ್ ಹಾಜಿ ಅವರು ಮಸೀದಿ ನಿರ್ಮಿಸಿದ್ದರು. ಅವರ ತಂದೆ ಮತ್ತು ನನ್ನ ತಾಯಿಯ ತಂದೆ ಇಬ್ಬರ ಹೆಸರೂ ಮುಹಿಯುದ್ದೀನ್ ಎಂದಾಗಿದ್ದು ಅವರ ಹೆಸರನ್ನು ಈ ಮಸೀದಿಗೆ ನಾಮಕರಣ ಮಾಡಿದ್ದರು. ಈ ಜಮಾಅತಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ ಇಲ್ಲೊಂದು ಸುಸಜ್ಜಿತವಾದ ಮಸೀದಿ ನಿರ್ಮಿಸಬೇಕೆಂದು ನನ್ನ ತಂದೆಯ ಕನಸಿತ್ತು. ಅಲ್ಲಾಹನ ಅಪಾರವಾದ ಅನುಗ್ರಹದಿಂದ ಇಂದು ಆ ಕನಸು ಈಡೇರಿದೆ ಎಂದರು.
ಮೂರು ವರ್ಷ ನಾನು ಸಂಕಷ್ಟಕ್ಕೆ ಸಿಲುಕಿದ್ದೆ. ಆದರೂ ನನ್ನ ತಂದೆ ತಾಯಿ, ಹಾಗೂ ನಿಮ್ಮೆಲ್ಲರ ಪ್ರಾರ್ಥನೆಯಿಂದ ಅಲ್ಲಾಹನು ಈ ಮಸೀದಿಯನ್ನು ಪೂರ್ಣಗೊಳಿಸಿದ್ದಾನೆ. ಅವನಿಗೆ ಸರ್ವಸ್ತುತಿ. ನಮ್ಮ ಕುಟುಂಬದ ಒಂದು ಪಾಲಿಸಿ ಇದೆ. ಬೇರೆಯವರ ಸುದ್ದಿಗೆ ನಾವು ಹೋಗುವುದಿಲ್ಲ. ಜನರಿಗೆ, ಸಮಾಜಕ್ಕೆ ಸಹಾಯ ಮಾಡಲು ಸಾಧ್ಯವಾಗುವುದಾದರೆ ಮಾಡುತ್ತೇವೆ. ಸಾಧ್ಯವಾಗದಿದ್ದರೆ ನಾವು ನಮ್ಮಷ್ಟಕ್ಕೆ ಸುಮ್ಮನೆ ಇರುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮಾತನಾಡಿ, ತುಂಬೆಯಲ್ಲಿ ಸುಸಜ್ಜಿತ ಹಾಗೂ ಸುಂದರವಾದ ಭವ್ಯ ಮಸೀದಿಯೊಂದು ನಿರ್ಮಾಣವಾಗಿರುವುದು ತುಂಬೆ ಜನತೆಯ ಸೌಭಾಗ್ಯವಾಗಿದೆ. ಇಷ್ಟೊಂದು ಸುಂದರವಾದ ಮಸೀದಿ ಕರಾವಳಿಯಲ್ಲಿ ಎಲ್ಲೂ ಇಲ್ಲ. ಬಿ.ಎ. ಗ್ರೂಪ್ ತುಂಬೆ ಸಂಸ್ಥಾಪಕ ಬಿ.ಅಹ್ಮದ್ ಹಾಜಿ ಅವರ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜಕ್ಕೆ ನೀಡಿರುವ ಕೊಡುಗೆಗಳು ಅಪಾರವಾಗಿದೆ. ಅವರನ್ನು ಮಾದರಿಯನ್ನಾಗಿಸಿ ಅವರ ಮಕ್ಕಳು ಇಂದು ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದ್ದಾರೆ. ಶಿಕ್ಷಣ ಹಾಗೂ ಸಮಾಜ ಸೇವೆ ಅಹ್ಮದ್ ಹಾಜಿ ಅವರ ಪರಂಪರೆಯಲ್ಲಿ ಅಡಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಮಸೀದಿಯಲ್ಲಿ ವಕ್ಫ್ ನೆರವೇರಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಮಲಾ ಮುಶಾವರ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರು ದುಅ ನೆರವೇರಿಸಿ ಮಾತನಾಡಿದರು.
ಬಿ.ಎ. ಗ್ರೂಪ್ ತುಂಬೆ ಇದರ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸಲಾಂ, ಯೆನೆಪೊಯ ವಿವಿ ಕುಲಪತಿ ವೈ ಅಬ್ದುಲ್ ಕುಂಞಿ ಯೆನೆಪೊಯ ಮಾತನಾಡಿದರು. ಬಿ.ಎ. ಗ್ರೂಪ್ ತುಂಬೆ ಇದರ ನಿರ್ದೇಶಕ ಮುಹಮ್ಮದ್ ಅಶ್ರಫ್, ರಾಜೀವ್ ಗಾಂಧಿ ವಿವಿ ಸಿಂಡಿಕೆಟ್ ಸದಸ್ಯ ಯು.ಟಿ.ಇಫ್ತಿಕಾರ್, ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಮಿತ್ತಬೈಲ್, ಮುಹಿಯುದ್ದೀನ್ ಅವರ ಕುಟುಂಬದ ಪ್ರಮುಖರಾದ ಬಿ.ಎ.ಸಾಲಿ, ಪುತ್ತುಬಾವ, ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುಂಬೆ ಮೊಯ್ದಿನ್ ಅವರನ್ನು ಮಸೀದಿ ಆಡಳಿತ ಕಮಿಟಿ ಹಾಗೂ ಜಮಾಅತ್ ನಾಗರಿಕರ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಸೀದಿ ಅಧ್ಯಕ್ಷ ಇಮ್ತಿಯಾಝ್ ಸನ್ಮಾನ ಪತ್ರ ವಾಚಿಸಿದರು. ಮಸೀದಿಯ ಗೌರವ ಅಧ್ಯಕ್ಷರಾಗಿ ಇದೇ ಸಂದರ್ಭದಲ್ಲಿ ತುಂಬೆ ಮೊಯ್ದಿನ್ ಅವರನ್ನು ಘೋಷನೆ ಮಾಡಲಾಯಿತು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಮೂಸಬ್ಬ ಪ್ರಸ್ತಾವಿಕವಾಗಿ ಮಾತನಾಡಿ, 1965ರಲ್ಲಿ ತುಂಬೆಗೆ ಬಂದು ಉದ್ಯಮವನ್ನು ಆರಂಭಿಸಿದ ಬಿ.ಎ. ಗ್ರೂಪ್ ತುಂಬೆ ಇದರ ಸಂಸ್ಥಾಪಕ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು, 1973ರಲ್ಲಿ ಜಾಗ ಖರೀದಿಸಿ ಮಸೀದಿ ಮತ್ತು ಮದರಸವನ್ನು ನಿರ್ಮಾಣ ಮಾಡಿದ್ದರು. 1985ರಲ್ಲಿ ಆ ಮಸೀದಿಯನ್ನು ವಿಸ್ತರಣೆ ಮಾಡಿದರೆ, 1997ರಲ್ಲಿ ಮತ್ತೊಮ್ಮೆ ವಿಸ್ತರಣೆ ಮಾಡಲಾಯಿತು ಎಂದು ಹೇಳಿದರು.
ತುಂಬೆಯಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ ಹಳೆ ಮಸೀದಿಯಲ್ಲಿ ಪ್ರಾರ್ಥನೆಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಸೀದಿಯನ್ನು ಮತ್ತಷ್ಟು ವಿಸ್ತರಣೆ ಮಾಡುವ ಬಗ್ಗೆ ಬಿ.ಅಹ್ಮದ್ ಹಾಜಿ ಅವರ ಹಿರಿಯ ಪುತ್ರ ತುಂಬೆ ಮೊಯ್ದಿನ್ ಬಳಿ ತೆರಳಿ ವಿಷಯ ಮಂಡಿಸಿದಾಗ ಅವರು ತನ್ನ ಸ್ವಂತ ಖರ್ಚಿನಲ್ಲಿ ಮಸೀದಿಯನ್ನು ನವೀಕರಿಸುವ ಭರಸವೆ ನೀಡಿದ್ದರು. ಇಂದು ಕರಾವಳಿಯಲ್ಲಿ ಪ್ರಥಮ ಸುಂದರ ಹಾಗೂ ಭವ್ಯವಾದ ಮಸೀದಿಯನ್ನು ನಿರ್ಮಿಸಿ ತುಂಬೆಯ ಜನತೆಗೆ ಸಮರ್ಪಿಸಿದ್ದಾರೆ. ಇದರ ಜೊತೆಗೆ ಶೈಕ್ಷಣಿಕವಾಗಿ ತುಂಬೆಯಲ್ಲಿ ಇನ್ನಷ್ಟು ಬದಲಾವಣೆ ಮಾಡುವ ಯೋಜನೆಯನ್ನು ಹಾಕಿದ್ದಾರೆ. ಇದರ ಪ್ರತಿಫಲ ಅವರಿಗೆ ಅಲ್ಲಾಹನ ಬಳಿ ಇದೆ ಎಂದು ಹೇಳಿದರು.
ಮಸೀದಿ ಜೊತೆ ಕಾರ್ಯದರ್ಶಿ ಅಬ್ದುಲ್ ರಶೀದ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಅಬ್ದುಲ್ ಅಝೀಝ್, ಲೆಕ್ಕ ಪರಿಶೋಧಕ ಇರ್ಫಾನ್, ಕೋಶಾಧಿಕಾರಿ ಟಿ.ಕೆ.ಶರೀಫ್, ಸದಸ್ಯರಾದ ಝಹೂರ್ ಅಹ್ಮದ್, ಇಸಾಕ್, ಮುಹಮ್ಮದ್ ಹನೀಫ್, ಲತೀಫ್ ಇಮಾಮಿ, ಆಸಿಫ್, ಅಬೂಬಕ್ಕರ್ ಹಾಜಿ, ಅಝೀಝ್ ಡಿ.ಎಂ. ಸಹಕರಿಸಿದರು.







.jpeg)

.jpeg)
.jpeg)
.jpeg)



.jpeg)
.jpeg)

