2000 ಕೋಟಿ ರೂ. ಖರ್ಚು ಮಾಡಿದ ಜಾಹೀರಾತುಗಳಲ್ಲಿ ಮಾತ್ರ ಮೋದಿಯ ಆಡಳಿತ ಕಾಣುತ್ತಿದೆ: ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ
ಚಂಡಿಗಡ,ಫೆ.17: ಕೇಂದ್ರವನ್ನು ಗುರುವಾರ ತೀವ್ರ ತರಾಟೆಗೆತ್ತಿಕೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಮೋದಿ ಸರಕಾರದ ಆಡಳಿತವು ಕೇವಲ ಜಾಹೀರಾತುಗಳಲ್ಲಿ ಕಾಣುತ್ತಿದೆ ಎಂದು ಹೇಳಿದರು. ಬಿಜೆಪಿ ಮತ್ತು ಆಪ್ ರಾಜಕೀಯ ಲಾಭಗಳಿಕೆಗಾಗಿ ಧರ್ಮ ಮತ್ತು ಜನರ ಭಾವನೆಗಳನ್ನು ಬಳಸಿಕೊಳ್ಳುತ್ತಿವೆ ಎಂದೂ ಅವರು ಆರೋಪಿಸಿದರು.
ಪಠಾಣಕೋಟ್ನಲ್ಲಿ ಚುನಾವಣಾ ರ್ಯಾಲಿ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೋದಿಯವರ ಆಡಳಿತವು ಕೇವಲ ಜಾಹೀರಾತುಗಳಲ್ಲಿದೆ,ದೇಶದಲ್ಲಿ ಯಾವುದೇ ಆಡಳಿತವಿಲ್ಲ. ಆಡಳಿತವಿದ್ದಿದ್ದರೆ ಉದ್ಯೋಗಾವಕಾಶಗಳು ಇರುತ್ತಿದ್ದವು ಮತ್ತು ಬೆಲೆ ಏರಿಕೆ ಇರುತ್ತಿರಲಿಲ್ಲ. ಆಡಳಿತವಿದ್ದಿದ್ದರೆ ಉದ್ಯೋಗಗಳನ್ನು ಸೃಷ್ಟಿಸುವ ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು ಮೋದಿ ತನ್ನ ಸ್ನೇಹಿತರಿಗೆ ಮಾರಾಟ ಮಾಡುತ್ತಿರಲಿಲ್ಲ ಎಂದು ಹೇಳಿದರು.
ದೇಶದಲ್ಲಿಯ ಬಡವರು,ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ,ಅವರ ಬಗ್ಗೆ ಚಿಂತೆ ಯಾರಿಗಿದೆ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ ಪ್ರಿಯಾಂಕಾ, ಆಡಳಿತವೆಲ್ಲಿದೆ? ಪ್ರಚಾರಕ್ಕಾಗಿ 2,000 ಕೋ.ರೂ.ಗಳನ್ನು ವ್ಯಯಿಸಲಾಗುತ್ತಿದೆ ಎಂದರು.
ರ್ಯಾಲಿಯಲ್ಲಿ ಮೋದಿ ಮತ್ತು ಆಪ್ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ದಾಳಿ ನಡೆಸಿದ ಪ್ರಿಯಾಂಕಾ,ಮೋದಿ ಮತ್ತು ಕೇಜ್ರಿವಾಲ್ ಪಂಜಾಬಿತನದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಕೇಳಿದಾಗ ತನಗೆ ನಗು ಬಂದಿತ್ತು. ಅವರು ಪಂಜಾಬಿತನವನ್ನು ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ? ಅದಕ್ಕಾಗಿ ಪಂಜಾಬಿತನವನ್ನು ಬದುಕಬೇಕು. ಪಂಜಾಬಿತನವು ಒಂದು ಭಾವನೆಯಾಗಿದೆ ಎಂದರು.
ನಿಮ್ಮೆದುರು ಪಂಜಾಬ್ ಮತ್ತು ಪಂಜಾಬಿತನದ ಬಗ್ಗೆ ಮಾತನಾಡುತ್ತಿರುವವರಲ್ಲಿ ಒಬ್ಬರು ತನ್ನ ಬಿಲಿಯಾಧಿಪತಿ ಸ್ನೇಹಿತರ ಮುಂದೆ ತಲೆ ಬಗ್ಗಿಸಿದ್ದಾರೆ ಮತ್ತು ಇನ್ನೊಬ್ಬರು ಕೇಜ್ರಿವಾಲ್. ಅವರು ರಾಜಕೀಯ ಮತ್ತು ಅಧಿಕಾರಕ್ಕಾಗಿ ಯಾರ ಮುಂದೆಯೂ ತಲೆ ಬಗ್ಗಿಸುತ್ತಾರೆ.ಇದು ಸತ್ಯ ಎಂದರು.







