ತಿರುಪತಿ ದೇವಾಲಯ ಟ್ರಸ್ಟ್ ಗೆ 10 ಕೋ.ರೂ. ಮೌಲ್ಯದ ನಗದು, ಸೊತ್ತು ದಾನ ನೀಡಿದ ಚೆನ್ನೈ ಮಹಿಳೆ

Photo ಕೃಪೆ: India Today
ಹೈದರಾಬಾದ್, ಫೆ. 17: ಚೆನ್ನೈಯ ಮಹಿಳೆಯೋರ್ವರು 3.2 ಕೋಟಿ ರೂಪಾಯಿ ನಗದು ಹಾಗೂ 6 ಕೋ.ರೂ. ಮೌಲ್ಯದ ಸೊತ್ತುಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಗೆ ದಾನವಾಗಿ ನೀಡಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಬಡ ಜನರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಎಸ್ವಿ ಪ್ರಾಣದಾನ ಟ್ರಸ್ಟ್ನ ನೆರವಿನಿಂದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರೇವತಿ ವಿಶ್ವನಾಥಂ ಅವರು ಈ ಮೊತ್ತವನ್ನು ದಾನವಾಗಿ ನೀಡಿದ್ದಾರೆ.
ರೇವತಿ ವಿಶ್ವನಾಥಂ ಅವರ ಸಹೋದರಿ ಡಾ. ಪರ್ವತಂ ಅವರು ಸಾಯುವ ಮುನ್ನ ತಮ್ಮ ನಗದು ಹಾಗೂ ಸೊತ್ತನ್ನು ಟ್ರಸ್ಟ್ ನ ಹೆಸರಿಗೆ ಉಯಿಲು ಬರೆದಿದ್ದರು. ರೇವತಿ ವಿಶ್ವನಾಥಂ, ಅವರ ಪತಿ ಪಿ.ಎ. ವಿಶ್ವನಾಥಂ ಹಾಗೂ ಸಹೋದರಿ ಪರ್ವತಂ ಅವರ ಉಯಿಲಿನ ಕಾರ್ಯ ನಿರ್ವಾಹಕ ವಿ. ಕೃಷ್ಣನ್ ಟಿಟಿಡಿ ಟ್ರಸ್ಟ್ ನ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಅವರಿಗೆ ತಿರುಮಲ ದೇವಾಲಯದಲ್ಲಿ ದಾಖಲೆಗಳನ್ನು ಗುರುವಾರ ಹಸ್ತಾಂತರಿಸಿದರು. ಡಾ. ಪರ್ವತಂ ಅವರು ವಿವಾಹವಾಗಿಲ್ಲ. ಅವರು ತಮ್ಮ ಎಲ್ಲ ಸೊತ್ತುಗಳನ್ನು ವೆಂಕಟೇಶ್ವರ ದೇವಾಲಯಕ್ಕೆ ದಾನ ಮಾಡಿದ್ದಾರೆ. ಈ ಹಿಂದೆ ಅವರು ಎಸ್.ವಿ. ಪ್ರಾಣದಾನ ಟ್ರಸ್ಟ್ ಹಾಗೂ ಟಿಡಿಡಿಯ ಶ್ರೀ ಬಾಲಾಜಿ ಆರೋಗ್ಯ ವರಪ್ರಸಾಧಿನಿ ಯೋಜನೆ (ಎಸ್ವಿಐಎಂಎಸ್)ಗೆ ಕೂಡ ದಾನ ಮಾಡಿದ್ದರು.







