2019ರಿಂದ ನಾಪತ್ತೆಯಾಗಿದ್ದ ಬಾಲಕಿ ಮನೆಯ ಮೆಟ್ಟಿಲ ಕೆಳಗಿದ್ದ ರಹಸ್ಯ ಕೊಠಡಿಯಲ್ಲಿ ಪತ್ತೆ

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ಫೆ.17: 2019ರಿಂದ ನಾಪತ್ತೆಯಾಗಿದ್ದ ಅಮೆರಿಕದ 6 ವರ್ಷದ ಬಾಲಕಿ, ಮನೆಯ ಮಹಡಿಗೆ ಹೋಗುವ ಮೆಟ್ಟಿಲಿನ ಕೆಳಗಿದ್ದ ಕತ್ತಲುತುಂಬಿದ್ದ ರಹಸ್ಯ ಕೊಠಡಿಯಲ್ಲಿ ಅಡಗಿಕೊಂಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
6 ವರ್ಷದ ಬಾಲಕಿ ಪೈಸ್ಲೀ ಶುಲ್ಟಿಸ್ 2019ರಿಂದ ನಾಪತ್ತೆಯಾಗಿದ್ದು ಮಗುವಿನ ಪೋಷಣೆಗೆ ಸಂಬಂಧಿಸಿದ ಕಾನೂನುಕಟ್ಟಲೆಯಲ್ಲಿ ಹಿನ್ನಡೆ ಅನುಭವಿಸಿದ ಮಗುವಿನ ಜೈವಿಕ ಪೋಷಕರಾದ ಕಿಂಬರ್ಲಿ ಮತ್ತು ಕಿರ್ಕ್ ಮಗುವನ್ನು ಅಪಹರಿಸಿರುವ ಶಂಕೆ ವ್ಯಕ್ತವಾಗಿತ್ತು. ಎರಡೂವರೆ ವರ್ಷದ ಹುಡುಕಾಟದ ಬಳಿಕ, ಮಗು ಸುಮಾರು 240 ಕಿಮೀ ದೂರದ ಸ್ಪೆನ್ಸರ್ ನಗರದಲ್ಲಿ ರಹಸ್ಯ ಸ್ಥಳದಲ್ಲಿ ಇದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಆ ಪ್ರದೇಶಕ್ಕೆ ಧಾವಿಸಿದ ಪೊಲೀಸರು ಅಲ್ಲಿನ ಮನೆಯಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಶೋಧ ನಡೆಸಿದಾಗ ಮಹಡಿಯ ಮೆಟ್ಟಿಲ ಕೆಳಗೆ ತಾತ್ಕಾಲಿಕವಾಗಿ ನಿರ್ಮಿಸಲಾದ ರಹಸ್ಯ ಕೊಠಡಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಅಪಹರಿಸಿದ್ದ ಕಿಂಬರ್ಲಿ ಕೂಡಾ ಆ ಕತ್ತಲ ಕೋಣೆಯಲ್ಲಿ ಅಡಗಿದ್ದಳು ಎಂದು ಪೊಲೀಸ್ ಮುಖ್ಯಸ್ಥ ಜೋಸೆಫ್ ಸಿನಾಗ್ರಾ ಹೇಳಿದ್ದಾರೆ.
ಇದಕ್ಕೂ ಮುನ್ನ ಹಲವು ಬಾರಿ ಈ ಮನೆಗೆ ಬಂದು ಶೋಧ ನಡೆಸಿದಾಗ ಮನೆಯವರು ನಮ್ಮೊಡನೆ ಸುಳ್ಳು ಹೇಳಿದ್ದರು. ಪುತ್ರಿ ಎಲ್ಲಿದ್ದಾಳೆ ಎಂಬ ಮಾಹಿತಿಯಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದರು. ಈಗ ಮಗುವನ್ನು ಪತ್ತೆಹಚ್ಚಲಾಗಿದ್ದು ಆರೋಗ್ಯವಾಗಿದೆ. ಪೊಲೀಸರು ಆ ಕತ್ತಲ ಕೋಣೆಯಿಂದ ಹೊರಗೆ ತಂದೊಡನೆ ತನಗೆ ಮೆಕ್ಡೊನಾಲ್ಡ್ನ ಊಟ ತರಿಸಿಕೊಡುವಂತೆ ಆಕೆ ಕೋರಿದಳು ಎಂದು ಸಿನಾಗ್ರಾ ಮಾಹಿತಿ ನೀಡಿದ್ದಾರೆ.
ಮಗುವಿನ ಅಜ್ಜನ ಮನೆಯಲ್ಲಿ ಮಗುವನ್ನು ಅಡಗಿಸಿಡಲಾಗಿತ್ತು. ಮಗುವಿನ ಪ್ರಾಣಕ್ಕೆ ಅಪಾಯ ತರುವ ಅಪರಾಧ ಎಸಗಿದ ಮತ್ತು ನ್ಯಾಯಾಲಯದ ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣವನ್ನು ಪೋಷಕರ ವಿರುದ್ಧ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







