ಉಕ್ರೇನ್ ಮೇಲೆ ರಶ್ಯಾ ಆಕ್ರಮಣದ ವಿರುದ್ಧ ಭಾರತದ ಬೆಂಬಲ ನಿರೀಕ್ಷೆ: ಅಮೆರಿಕ
"ಸೇನೆ ಹಿಂದೆಗೆತದ ರಶ್ಯಾ ಹೇಳಿಕೆ ಸುಳ್ಳು"

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್, ಫೆ.17: ಒಂದು ವೇಳೆ ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ಎಸಗಿದರೆ, ನಿಯಮ ಆಧಾರಿತ ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ಭಾರತವು ತನ್ನ ಬೆಂಬಲಕ್ಕೆ ಬರಬಹುದೆಂಬ ವಿಶ್ವಾಸ ಇದೆ ಎಂದು ಅಮೆರಿಕ ಹೇಳಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕ್ವಾಡ್ ಸಚಿವರ ಸಭೆಯಲ್ಲಿ ರಶ್ಯಾ ಮತ್ತು ಉಕ್ರೇನ್ ವಿಷಯದ ಬಗ್ಗೆ ಚರ್ಚೆ ನಡೆದಿದ್ದು ಈ ಸಭೆಯಲ್ಲಿ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕದ ವಿದೇಶ ಸಚಿವರು ಪಾಲ್ಗೊಂಡಿದ್ದರು ಎಂದು ಅಮೆರಿಕದ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಬುಧವಾರ ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿಗೆ ರಾಜತಾಂತ್ರಿಕ ಮತ್ತು ಶಾಂತರೀತಿಯ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ. ನಿಯಮಾಧಾರಿತ ಅಂತರಾಷ್ಟೀಯ ಕಾನೂನನ್ನು ಬಲಪಡಿಸುವುದಕ್ಕೆ ಸಭೆಯಲ್ಲಿ ಮಹತ್ವ ನೀಡಲಾಗಿದೆ. ನಮ್ಮ ಭಾರತದ ಜೊತೆಗಾರರು ಈ ಕಾನೂನಿಗೆ ಬದ್ಧವಾಗಿದ್ದಾರೆಂದು ನಮಗೆ ತಿಳಿದಿದೆ. ಇದೇ ರೀತಿಯ ಹಲವು ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಗಡಿಯನ್ನು ಬಲಪ್ರಯೋಗದಿಂದ ಮರು ಗುರುತಿಸಲಾಗದು ಎಂಬುದು ಇಂತಹ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಪ್ರೈಸ್ ಹೇಳಿದ್ದಾರೆ.
ದೊಡ್ಡ ದೇಶಗಳು ಸಣ್ಣ ದೇಶಗಳನ್ನು ಬೆದರಿಸುವಂತಿಲ್ಲ. ಯಾವುದೇ ದೇಶದ ವಿದೇಶ ಕಾರ್ಯನೀತಿ, ಸಹಭಾಗಿತ್ವ, ಪಾಲುದಾರಿಕೆ, ಒಪ್ಪಂದ ಹೇಗಿರಬೇಕು ಎಂಬುದನ್ನು ಆಯಾ ದೇಶದ ಜನರೇ ನಿರ್ಧರಿಸುತ್ತಾರೆ. ಈ ನಿಯಮವು ಇಂಡೊ ಪೆಸಿಫಿಕ್ ವಲಯ ಸಹಿತ ಯುರೋಪ್ನಲ್ಲೂ ಏಕರೀತಿ ಅನ್ವಯಿಸುತ್ತದೆ ಎಂದವರು, ಚೀನಾವು ಭಾರತ ಸಹಿತ ನೆರೆಹೊರೆಯ ದೇಶದೊಂದಿಗೆ ಅನುಸರಿಸುತ್ತಿರುವ ಆಕ್ರಮಣಕಾರಿ ನೀತಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.
ಸೇನೆ ಹಿಂದೆಗೆತದ ರಶ್ಯಾ ಹೇಳಿಕೆ ಸುಳ್ಳು: ಅಮೆರಿಕ
ಉಕ್ರೇನ್ ಗಡಿಭಾಗದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ರಶ್ಯಾ ನೀಡಿದ ಹೇಳಿಕೆ ಸುಳ್ಳು ಎಂದು ಅಮೆರಿಕದ ಉನ್ನತ ಅಧಿಕಾರಿ ಹೇಳಿದ್ದಾರೆ.
ಉಕ್ರೇನ್ ಗಡಿಭಾಗದಿಂದ ಸೇನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಮಂಗಳವಾರ ರಶ್ಯಾ ಸರಕಾರ ಹೇಳಿದ್ದು ಈ ಹೇಳಿಕೆ ವಿಶ್ವದಾದ್ಯಂತ ವ್ಯಾಪಕ ಗಮನ ಸೆಳೆದಿದೆ. ಆದರೆ ಇದು ಸುಳ್ಳು ಎಂಬುದು ನಮಗೆ ತಿಳಿದಿದೆ ಎಂದವರು ಹೇಳಿದ್ದಾರೆ.
ಬುಧವಾರವೂ ಉಕ್ರೇನ್ ಗಡಿಗೆ ರಶ್ಯಾ ಕೆಲವು ಯೋಧರನ್ನು ರವಾನಿಸಿದ್ದು ಕಳೆದ ಎರಡು ಮೂರು ದಿನದಲ್ಲಿ ಸುಮಾರು 7000 ಹೆಚ್ಚುವರಿ ಯೋಧರನ್ನು ನಿಯೋಜಿಸಿರುವ ಮಾಹಿತಿ ಲಭಿಸಿದೆ ಎಂದವರು ಹೇಳಿದ್ದಾರೆ.
ಉಕ್ರೇನ್ ಗಡಿಭಾಗದಲ್ಲಿ ಸೇನಾ ಕವಾಯತು ಮುಕ್ತಾಯಗೊಂಡಿದ್ದು ಅಲ್ಲಿಂದ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರಕಿದೆ ಎಂದು ರಶ್ಯಾದ ರಕ್ಷಣಾ ಸಚಿವಾಲಯ ಬುಧವಾರ ಹೇಳಿದ್ದು ಇದಕ್ಕೆ ಪುರಾವೆಯಾಗಿ ತುಕಡಿ ವಾಪಸಾಗುವ ವೀಡಿಯೊವನ್ನು ಪ್ರಸಾರ ಮಾಡಿದೆ. ಆದರೆ, ಪ್ರಮುಖ ತುಕಡಿಗಳನ್ನು ಉಕ್ರೇನ್ ಗಡಿಭಾಗಕ್ಕೆ ರವಾನಿಸುತ್ತಿರುವ ರಶ್ಯಾ, ಈಗ ಗಡಿಭಾಗದಲ್ಲಿ ಸುಮಾರು 1,50,000 ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.







