ರಾಂಚಿ: ಎನ್‌ಕೌಂಟರ್ ನಲ್ಲಿ ಮಾವೋವಾದಿ ಹತ್ಯೆ
ರಾಂಚಿ (ಜಾರ್ಖಂಡ್), ಫೆ. 17: ಜಾರ್ಖಂಡ್ನ ಲೋಹರ್ದಗಾ ಜಿಲ್ಲೆಯ ಬುಲ್ಬುಲ್ ಗ್ರಾಮದಲ್ಲಿ ಬುಧವಾರ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಸಿಪಿಐ (ಮಾವೋವಾದಿ) ನಾಯಕನೋರ್ವ ಹತನಾಗಿದ್ದಾನೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಈತನ ತಲೆಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಮೃತಪಟ್ಟ ಸಿಪಿಐ (ಮಾವೋವಾದಿ)ನಾಯಕನನ್ನು ರವೀಂದರ್ ಘಂಝು ಎಂದು ಗುರುತಿಸಲಾಗಿದೆ. ಈತ ಜಾರ್ಖಂಡ್ ನ ಲೋಹರ್ದಗಾ, ಲತೇಹಾರ್ ಹಾಗೂ ಗುಮ್ಲಾ ಜಿಲ್ಲೆಯಲ್ಲಿ ಸಕ್ರಿಯನಾಗಿದ್ದ. 2011 ಮೇ 3ರಂದು ಲೋಹರ್ದಗಾದ ಧರ್ಧಾರಿಯದಲ್ಲಿ ಸಂಭವಿಸಿದ ಐಇಡಿ ಸ್ಫೋಟದಲ್ಲಿ ಈತ ಪ್ರಧಾನ ಆರೋಪಿ. ಈ ದಾಳಿಯಲ್ಲಿ ಸಿಆರ್ಪಿಎಫ್ನ 6 ಮಂದಿ ಹಾಗೂ ಜಾರ್ಖಂಡ್ ಪೊಲೀಸ್ ನ 5 ಮಂದಿ ಮೃತಪಟ್ಟಿದ್ದರು.
2019 ನವೆಂಬರ್ 22ರಂದು ಲುಕೆಯಿಯಾ ಮೋರೆ, ಲತೇಹಾರ್ನಲ್ಲಿ ಘಂಝು ಜಾರ್ಖಂಡ್ ಪೊಲೀಸ್ನ ನಾಲ್ವರು ಸಿಬ್ಬಂದಿಯನ್ನು ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಣಿಗಾರಿಕೆಯ ವಾಹನಗಳಿಗೆ ಬೆಂಕಿ ಹಚ್ಚಿರುವುದು, ನಾಗರಿಕರ ಹತ್ಯೆ, ಐಇಡಿ ಸ್ಫೋಟ, ಸ್ಥಳೀಯ ಗುತ್ತಿಗೆದಾರರು ಹಾಗೂ ಗಣಿ ಏಜೆಂಟರಿಂದ ದೊಡ್ಡ ಪ್ರಮಾಣದ ಹಣ ಸಂಗ್ರಹಿಸುವುದು ಸೇರಿದಂತೆ ವಿವಿಧ ಅಕ್ರಮಗಳಲ್ಲಿ ಈತನ ತಂಡ ಭಾಗಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಲೋಹರ್ದಗಾ ಜಿಲ್ಲೆಯ ಬುಲ್ಬುಲ್ ಗ್ರಾಮದ ಪ್ರದೇಶದಲ್ಲಿ ರವೀಂದರ್ ಘಂಝು ಹಾಗೂ 30-40 ಮಾವೋವಾದಿಗಳು ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಮೇಲೆ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿಯ ಆಧಾರದಲ್ಲಿ ಫೆಬ್ರವರಿ 8ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಾರ್ಖಂಡ್ ಪೊಲೀಸ್ ಹಾಗೂ ಸಿಆರ್ಪಿಎಫ್ನ ಜಂಟಿ ಕಾರ್ಯಾಚರಣೆಯ 9ನೇ ದಿನ ಆತನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







