ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ ಚುನಾವಣೆ: ಮನವಿಯ ತುರ್ತು ಆಲಿಕೆಗೆ ಸುಪ್ರೀಂ ಒಪ್ಪಿಗೆ
ಹೊಸದಿಲ್ಲಿ, ಫೆ. 17: 2020 ಸೆಪ್ಟಂಬರ್ 10ರಂದು ಅವಧಿ ಅಂತ್ಯಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದ ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಬಿಬಿಎಂಪಿ ಚುನಾವಣೆಯ ಕೆಲವು ಅಭ್ಯರ್ಥಿಗಳ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ, ಬಿಬಿಎಂಪಿಯ ಅವಧಿ 2020 ಸೆಪ್ಟಂಬರ್ನಲ್ಲಿ ಕೊನೆಗೊಂಡಿದ್ದರೂ ಚುನಾವಣೆ ನಡೆದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠಕ್ಕೆ ತಿಳಿಸಿದರು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ತಡೆ ಉಂಟಾಗಿದೆ ಎಂದು ಅವರು ತಿಳಿಸಿದರು. ‘‘ದೇಶದಲ್ಲಿ ಸಾಕಷ್ಟು ಚುನಾವಣೆಗಳು ನಡೆಯುತ್ತಿವೆ’’ಎಂದು ನ್ಯಾಯಾಧೀಶರಾದ ಎ.ಎಸ್. ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರನ್ನು ಕೂಡ ಒಳಗೊಂಡ ಪೀಠ ತಿಳಿಸಿತು. ಅಧಿಕಾರಾವಧಿ ಮುಗಿದಿರುವ ಬಿಬಿಎಂಪಿಯ ಚುನಾವಣೆಗೆ ಸಂಬಂಧಿಸಿದ ವಿಷಯ ಇದಾಗಿದೆ ಎಂದು ಅರೋರಾ ಅವರು ಹೇಳಿದರು.
ಅದಕ್ಕೆ ಪೀಠ, ‘‘ನೀವು ಉಲ್ಲೇಖಿಸಿದ್ದೀರಿ. ನಮಗೆ ಬಿಟ್ಟುಬಿಡಿ. ನಾವು ನೋಡಿಕೊಳ್ಳುತ್ತೇವೆ’’ ಎಂದಿತು. ಬಿಬಿಎಂಪಿಯ 198 ವಾರ್ಡ್ಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ (ಎಸ್ಇಸಿ)ಕ್ಕೆ ಸೂಚಿಸಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ತನ್ನ ಬಾಕಿ ಇರುವ ಮನವಿಯನ್ನು ತುರ್ತು ವಿಚಾರಣೆ ನಡೆಸುವಂತೆ ಕೋರಿ ಕರ್ನಾಟಕ ಸರಕಾರ ಈ ಹಿಂದೆ ಮನವಿ ಸಲ್ಲಿಸಿತ್ತು. ಬಿಬಿಎಂಪಿಯ ಐದು ವರ್ಷಗಳ ಅವಧಿ 2020ರಲ್ಲಿ ಅಂತ್ಯಗೊಂಡಿದೆ. ಆಗಿನ ಸಿಜೆಐ ಎಸ್.ಎ. ಬೊಬ್ಡೆ (ನಿವೃತ್ತವಾದಾಗಿನಿಂದ) ನೇತೃತ್ವದ ಪೀಠ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಿರುವುದರಿಂದ ತುರ್ತು ವಿಚಾರಣೆಯ ಅಗತ್ಯದೆ ಇದೆ ಎಂದು ಪೀಠ ಹೇಳಿತು.
ಉಚ್ಚ ನ್ಯಾಯಾಲಯ 2020 ಡಿಸೆಂಬರ್ 4ರಂದು ನೀಡಿದ ಆದೇಶದಲ್ಲಿ 6 ವಾರಗಳ ಒಳಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ನ ಮೂರನೇ ತಿದ್ದುಪಡಿ ಕಾಯ್ದೆ (2020)ಯಲ್ಲಿ ಉಲ್ಲೇಖಿಸದಂತೆ 243 ಸ್ಥಾನಗಳಿಗೆ ಬದಲು 2020 ಸೆಪ್ಟಂಬರ್ 23ರ ಪುನರ್ವಿಂಗಡಣೆ ಅಧಿಸೂಚನೆಯಂತೆ ಬಿಬಿಎಂಪಿ ಚುನಾವಣೆ ನಡೆಸುವಂತೆ ನಿರ್ದೇಶಿಸಿ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿತ್ತು.







