ದಲಿತ ಮಹಿಳೆಯ ಪ್ರಾರ್ಥನೆಗೆ ತಡೆ: ತಮಿಳುನಾಡು ದೇವಾಲಯದ ಅರ್ಚಕರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಅಡಿ ದೂರು

ಚೆನ್ನೈ, ಫೆ. 17: ತಮಿಳುನಾಡಿನ ಚಿದಂಬರಂ ನಟರಾಜ ದೇವಾಲಯದ ಒಳಗಿರುವ ವೇದಿಕೆಯಲ್ಲಿ ನಿಂತು ಪರಿಶಿಷ್ಟ ಜಾತಿಯ ಮಹಿಳೆ ಓರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆ ತಡೆ ಒಡ್ಡಿದ ದೇವಾಲಯದ 20 ಮಂದಿ ಅರ್ಚಕರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಚಿದಂಬರಂ ನಟರಾಜ ದೇವಾಲಯದಲ್ಲಿ ಫೆಬ್ರವರಿ 15ರಂದು ನಡೆದಿದೆ.
ಅರ್ಚಕರಿಗೆ ಮೀಸಲಿರಿಸಿದ್ದ ವೇದಿಕೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಜಯಶೀಲಾ ಅವರು ಪ್ರಾರ್ಥನೆ ಸಲ್ಲಿಸುವುದಕ್ಕೆ ಅರ್ಚಕರು ತಡೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಜಯಶೀಲಾ ಅವರು ಪ್ರಾರ್ಥನೆ ಸಲ್ಲಿಸಲು ವೇದಿಕೆ ಹತ್ತುತ್ತಿದ್ದಂತೆ ಅರ್ಚಕರು ಅವರ ಸುತ್ತುವರಿದರು ಹಾಗೂ ನಿಂದಿಸಲು ಆರಂಭಿಸಿದರು.
ಈ ಬಗ್ಗೆ ಹಲವರು ವೀಡಿಯೊ ದಾಖಲೆ ಮಾಡಿಕೊಂಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಯಶೀಲಾ ಅವರನ್ನು ಅರ್ಚಕರು ಕೈ ಹಿಡಿದು ಎಳೆಯುತ್ತಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅರ್ಚಕರು ತನಗೆ ಬೆದರಿಕೆ ಒಡ್ಡಿದ್ದಾರೆ ಎಂದು ಜಯಶೀಲಾ ಅವರು ದೂರು ದಾಖಲಿಸಿದ್ದಾರೆ. ಈ ನಡುವೆ ಜಯಶೀಲಾ ಅವರು ದೇವಾಲಯದ ಪಾತ್ರೆಗಳನ್ನು ಕಳವುಗೈದಿದ್ದಾರೆ ಎಂದು ಅರ್ಚಕರು ಆರೋಪಿಸಿದ್ದಾರೆ.







