ಕೋವಿಡ್ ಸಾವಿನ ಸಂಖ್ಯೆಯನ್ನು ಲೆಕ್ಕಕ್ಕಿಂತ ಕಡಿಮೆ ತೋರಿಸಲಾಗಿದೆ ಎಂಬ ಮಾಧ್ಯಮ ವರದಿ ತಿರಸ್ಕರಿಸಿದ ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಫೆ. 17: ಭಾರತದಲ್ಲಿ ಕೋವಿಡ್ ಸೋಂಕಿನಿಂದ ಸಂಭವಿಸಿದ ಸಾವಿನ ಸಂಖ್ಯೆ ಅಧಿಕೃತ ಲೆಕ್ಕಾಚಾರಕ್ಕಿಂತ ತುಂಬಾ ಅಧಿಕವಾಗಿದೆ ಎಂಬ ಪ್ರಕಟಿತ ಸಂಶೋಧನ ಪ್ರಬಂಧ ಆಧರಿಸಿದ ಮಾಧ್ಯಮ ವರದಿಯನ್ನು ಗುರುವಾರ ತಿರಸ್ಕರಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಇದು ತಪ್ಪು ಹಾಗೂ ನಿಖರವಲ್ಲದ್ದು ಎಂದಿದೆ.
ಕೋವಿಡ್ನಿಂದ ಸಂಭವಿಸುವ ಸಾವು ಸೇರಿದಂತೆ ಸಾವನ್ನು ವರದಿ ಮಾಡಲು ದೇಶದಲ್ಲಿ ಸುದೃಢ ವ್ಯವಸ್ಥೆ ಇದೆ. ಗ್ರಾಮಪಂಚಾಯತ್ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ವರೆಗೆ ಆಡಳಿತದ ವಿವಿಧ ಹಂತದಲ್ಲಿ ಅಂಕಿ-ಅಂಶವನ್ನು ಸಂಕಲಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ‘‘ಸಾವಿನ ವರದಿಯನ್ನು ನಿರಂತರ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ವತಂತ್ರವಾಗಿ ವರದಿ ಮಾಡಿದ ಬಳಿಕ ಕೇಂದ್ರ ಸರಕಾರ ಎಲ್ಲ ಸಾವಿನ ಸಂಖ್ಯೆಯನ್ನು ಸಂಕಲಿಸುತ್ತದೆ’’ ಎಂದು ಅದು ಹೇಳಿದೆ.
ಭಾರತದಲ್ಲಿ ಕೋವಿಡ್ನಿಂದ ಸಾವನ್ನಪ್ಪಿರುವರ ಸಂಖ್ಯೆ ಅಧಿಕೃತ ಅಂಕಿ-ಅಂಶಗಳಿಗಿಂತ ಅತಿ ಹೆಚ್ಚಿದೆ. ವಾಸ್ತವ ಲೆಕ್ಕಕ್ಕಿಂತ ಕಡಿಮೆ ತೋರಿಸಲಾಗಿದೆ ಎಂಬ ಪ್ರಕಟಿತ ಸಂಶೋಧನಾ ಪ್ರಬಂಧ ಆಧರಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ ಎಂದು ಅದು ಹೇಳಿದೆ. ದೇಶದಲ್ಲಿ ಕೋವಿಡ್ ಸೋಂಕಿನಿಂದ 2021 ನವೆಂಬರ್ ಆರಂಭದ ವರೆಗೆ 32 ಹಾಗೂ 37 ಲಕ್ಷದ ನಡುವೆ ಸಾವು ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಆದರೆ, ಅಧಿಕೃತ ಅಂಕಿ-ಅಂಶ ಕೇವಲ 4.6 ಲಕ್ಷ ಮಾತ್ರ ಇದೆ ಎಂದು ಅಧ್ಯಯನ ಪ್ರತಿಪಾದಿಸಿದೆ. ‘‘ಈ ಹಿಂದೆ ಇದೇ ರೀತಿಯ ಮಾಧ್ಯಮ ವರದಿಗಳಿಗೆ ಹೇಳಿದಂತೆ, ಈ ವರದಿ ಕೂಡ ಸುಳ್ಳು ಹಾಗೂ ನಿಖರವಾಗಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳುತ್ತೇವೆ. ಈ ವರದಿಗಳು ಸತ್ಯವನ್ನು ಆಧರಿಸಿಲ್ಲ. ವದಂತಿಯ ರೂಪದಲ್ಲಿ ಇದೆ’’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.







