ಹಿಜಾಬ್ ವಿಷಯದಲ್ಲಿ ಹೊರಗಿನ ದೇಶಗಳಿಗೆ ಪ್ರತಿಕ್ರಿಯಿಸಲು ಹಕ್ಕಿಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಹೊಸದಿಲ್ಲಿ: ಕರ್ನಾಟಕದಲ್ಲಿನ ಹಿಜಾಬ್ ವಿವಾದ ಮತ್ತು ಅದರ ಹೈಕೋರ್ಟ್‌ನ ವಿಚಾರಣೆಯು ಭಾರತದ ಆಂತರಿಕ ವಿಷಯವಾಗಿದೆ. ಅದರ ಬಗ್ಗೆ ಪ್ರತಿಕ್ರಿಯಿಸಲು ಇತರ ದೇಶಗಳಿಗೆ ಯಾವುದೇ ಹಕ್ಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
"ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಷಯವಲ್ಲ. ಭಾರತದ ಆಂತರಿಕ ವಿಷಯವಾಗಿರುವುದರಿಂದ ಬೇರೆ ದೇಶದಿಂದ ಹಾಗೂ ಹೊರಗಿನವರಿಂದ ಯಾವುದೇ ಪ್ರತಿಕ್ರಿಯೆ ಸ್ವಾಗತಾರ್ಹವಲ್ಲ" ಎಂದು ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.
"ನಮ್ಮಲ್ಲಿ ಸಾಂವಿಧಾನಿಕ ಕಾರ್ಯವಿಧಾನ, ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ತತ್ವವಿದೆ. ಅದು ಅಂತಹ ವಿಷಯಗಳಿಗೆ ಪರಿಹಾರಗಳನ್ನು ಹುಡುಕಲು ನಮಗೆ ಚೌಕಟ್ಟನ್ನು ನೀಡುತ್ತದೆ. ಈ ವಿಷಯವನ್ನು ಈಗ ಕರ್ನಾಟಕ ಹೈಕೋರ್ಟ್ ಪರಿಶೀಲಿಸುತ್ತಿದೆ" ಎಂದು ಅವರು ಹೇಳಿದ್ದಾರೆ.
"ಭಾರತದ ಸಂವಿಧಾನ ಮತ್ತು ಅದರ ನಾಗರಿಕರಿಗೆ ಸಂಬಂಧಿಸಿದ ಆಂತರಿಕ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ನೀಡಲು ಹೊರಗಿನವರಿಗೆ ಯಾವುದೇ ಹಕ್ಕಿಲ್ಲ" ಎಂದು ಅವರು ಹೇಳಿದ್ದಾರೆ.
ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸಬಾರದೆಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಒತ್ತಾಯಿಸುವುದು ಮತ್ತು ಇದನ್ನು ಒಪ್ಪದ ವಿದ್ಯಾರ್ಥಿನಿಯರನ್ನು ತರಗತಿಗಳಿಗೆ ನಿರ್ಬಂಧಿಸಿದ ಕ್ರಮವು ರಾಷ್ಟ್ರಾದ್ಯಂತ ಸುದ್ದಿ ಆಗಿದೆ. ಹಲವು ಅಂತಾರಾಷ್ಟ್ರೀಯ ಗಣ್ಯರು, ಸಂಸ್ಥೆಗಳು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಹೇಳಿಕೆ ನೀಡಿದೆ.







