ಹೊಸದಿಲ್ಲಿ: ಬಾಂಬ್ ಬೆದರಿಕೆ ಕರೆ; ಆತಂಕ
ಹೊಸದಿಲ್ಲಿ, ಫೆ. 17: ಪೂರ್ವದಿಲ್ಲಿಯ ಎರಡು ಪ್ರತ್ಯೇಕ ಸ್ಥಳಗಳಿಂದ ಪರಿತ್ಯಕ್ತ ಬ್ಯಾಗ್ ಪತ್ತೆ ಹಾಗೂ ಬಾಂಬ್, ಐಇಡಿ ಬೆದರಿಕೆಯ ಕರೆ ಗುರುವಾರ ಆತಂಕದ ವಾತಾವರಣ ನಿರ್ಮಾಣ ಮಾಡಿತು. ಆತಂಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಎನ್ಎಸ್ಜಿಯನ್ನು ಸ್ಥಳಕ್ಕೆ ಕರೆಸಿಕೊಂಡರು.
‘‘ಶಾಹದರ ಜಿಲ್ಲೆಯಲ್ಲಿ ಪರಿತ್ಯಕ್ತ ಬ್ಯಾಗ್ ಪತ್ತೆಯಾಯಿತು. ನಾವು ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಅಪರಾಹ್ನ 2.15ಕ್ಕೆ ದಿಲ್ಲಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಬಾಂಬ್ ಬೆದರಿಕೆಯ ಕರೆ ಸ್ವೀಕರಿಸಿತು’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘‘ಈ ನಡುವೆ ನ್ಯೂ ಸೀಮಾಪುರಿಯಿಂದ ಐಇಡಿ ಕುರಿತು ಬೆದರಿಕೆ ಕರೆ ಸ್ವೀಕರಿಸಿದೆವು. ಈ ಕರೆ ಐಇಡಿಗೆ ಸಂಬಂಧಿಸಿದ್ದು. ನಾವು ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.
‘‘ಈ ಕರೆ ಗಾಝಿಪುರದಲ್ಲಿ ಐಇಡಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದೆ. ಗಾಝಿಪುರದ ಮಂಡಿಯಲ್ಲಿ ಜನವರಿ 17ರಂದು 3 ಕಿ.ಗ್ರಾಂ ಐಇಡಿ ಪತ್ತೆಯಾಗಿತ್ತು. ಮನೆಯೊಂದರಲ್ಲಿ ಐಇಡಿ ಇದ್ದ ಬ್ಯಾಗ್ ಅನ್ನು ವಿಶೇಷ ತನಿಖಾ ತಂಡ ಪತ್ತೆ ಮಾಡಿತ್ತು. ಮನೆಯ ಬಾಡಿಗೆಯಲ್ಲಿದ್ದ ವ್ಯಕ್ತಿ ನಾಪತ್ತೆಯಾಗಿದ್ದ. ಅನಂತರ ಮನೆಯ ಒಡೆಯನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು’’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





