ಹಿಜಾಬ್ ಪ್ರಕರಣ: ತನ್ನ ಮಧ್ಯಂತರ ಆದೇಶವನ್ನು ತಪ್ಪಾಗಿ ಜಾರಿಗೊಳಿಸುತ್ತಿರುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು: ಹಿಜಾಬ್ ತೆಗೆಯಬೇಕೆಂಬ ಒತ್ತಾಯದೊಂದಿಗೆ ವಿದ್ಯಾರ್ಥಿನಿಯರನ್ನು ಗೇಟುಗಳ ಹೊರಗೆ ಕೆಲ ಕಾಲೇಜುಗಳಲ್ಲಿ ತಡೆಯಲಾಗುತ್ತಿರುವ ಕುರಿತಂತೆ ಇಂದಿನ ಹಿಜಾಬ್ ಪ್ರಕರಣದ ವಿಚಾರಣೆ ಸಂದರ್ಭ ವಕೀಲ ಮುಹಮ್ಮದ್ ತಾಹಿರ್ ಹೈಕೋರ್ಟಿನ ಗಮನ ಸೆಳೆದಿದ್ದಾರಲ್ಲದೆ ಹಾಗೂ ಹೈಕೋರ್ಟಿನ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಶಿಕ್ಷಕಿಯರಿಗೆ ಕೂಡ ಹಿಜಾಬ್ ಧರಿಸಲು ಅನುಮತಿಸಲಾಗುತ್ತಿಲ್ಲ ಎಂದರು.
ಕಾನೂನು ಸುವ್ಯವಸ್ಥೆ ಸ್ಥಿತಿಯನ್ನು ಗಮನದಲ್ಲಿರಿಸಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ಜಾರಿಗೊಳಿಸಿದೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳು ಸಮವಸ್ತ್ರ ನಿಗದಿಪಡಿಸಿದ ಕಾಲೇಜುಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ತಿಳಿಸಿದೆ ಎಂದು ಅವರು ಹೇಳಿದರು. "ಪ್ರತಿ ಇಲಾಖೆ ಆದೇಶವನ್ನು ಭಿನ್ನವಾಗಿ ಅರ್ಥೈಸುತ್ತಿದೆ. ನಿನ್ನೆ ಅಲ್ಪಸಂಖ್ಯಾತ ಇಲಾಖೆ ಕೂಡ ಆದೇಶ ಹೊರಡಿಸಿ ಉರ್ದು ಕಾಲೇಜುಗಳಲ್ಲಿಯೂ ಜಾರಿಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆದರಿಸಲಾಗುತ್ತಿದೆ. ಆದೇಶದಲ್ಲಿ ತರಗತಿ ಕೊಠಡಿ ಎಂದು ಹೇಳಲಾಗಿದ್ದರೆ ಗೇಟುಗಳಲ್ಲಿಯೇ ವಿದ್ಯಾರ್ಥಿಗಳನ್ನು ನಿಲ್ಲಿಸಲಾಗುತ್ತಿದೆ,''ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ "ನಮ್ಮ ಆದೇಶ ಬಹಳ ಸ್ಪಷ್ಟವಾಗಿತ್ತು," ಎಂದಿದ್ದಾರೆ.
ಈ ಕುರಿತು ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನೂ ಮುಖ್ಯ ನ್ಯಾಯಮೂರ್ತಿಗಳು ಕೇಳಿದರು. ಅದಕ್ಕೆ ಉತ್ತರಿಸಿದ ಅವರು "ನನಗೆ ಮಾಹಿತಿ ಒದಗಿಸಿ. ಕೋರ್ಟ್ ಆದೇಶದ ವ್ಯಾಪ್ತಿಯನ್ನು ಮೀರಿ ಯಾರೂ ಯಾವುದೇ ಕ್ರಮಕೈಗೊಳ್ಳದಂತೆ ನಾವು ಸೂಚಿಸುತ್ತೇವೆ,'' ಎಂದರು.
ಸರಕಾರ ಈ ನಿಟ್ಟಿನಲ್ಲಿ ವರದಿ ನೀಡಬೇಕು ಎಂದು ವಕೀಲ ತಾಹಿರ್ ಕೋರಿದಾಗ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು "ನೀವು ಅರ್ಜಿ ಸಲ್ಲಿಸಿ, ನಾವು ಪರಿಗಣಿಸುತ್ತೇವೆ. ನಿಮ್ಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡಿ, ಕೋರ್ಟ್ ಆದೇಶದಂತೆಯೇ ಕಾರ್ಯಾಚರಿಸುವಂತೆ ಎಲ್ಲರಿಗೂ ಸೂಚಿಸುವುದಾಗಿ ಎಜಿ ಹೇಳುತ್ತಿದ್ದಾರೆ,'' ಎಂದರು.
ಇದನ್ನೂ ಓದಿ: ರಾಯಚೂರಿನಿಂದ ನ್ಯಾ.ಮಲ್ಲಿಕಾರ್ಜುನಗೌಡ ಬೆಂಗಳೂರಿಗೆ ವರ್ಗಾವಣೆ