ಮುಡಿಪು :ಯುವಕನ ಮೃತದೇಹ ಪತ್ತೆ
ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಕಂಪೆನಿಯೊಂದರಲ್ಲಿ ಪ್ಲಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುಲ್ಕಿಯ ಕಿಲ್ಪಾಡಿ ಯುವಕನ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.
ಮೃತ ಯುವಕನನ್ನು ಮುಲ್ಕಿ ಕಿಲ್ಪಾಡಿ ನಿವಾಸಿ ರಾಜೇಶ್ ದೇವಾಡಿಗ (32 )ಎಂದು ಗುರುತಿಸಲಾಗಿದೆ.
ರಾಜೇಶ್ ಕಳೆದ ಎಂಟು ವರ್ಷಗಳಿಂದ ಇನ್ಫೋಸಿಸ್ ಕಂಪನಿಯಲ್ಲಿ ಪ್ಲಂಬರ್ ಕೆಲಸ ನಿರ್ವಹಿಸುತ್ತಿದ್ದು ಮಂಗಳವಾರ ಸಂಜೆ ಕಂಪನಿಯ ಬಹುಮಹಡಿ ಕಟ್ಟಡದಲ್ಲಿ ಕೆಲಸಕ್ಕೆಂದು ತೆರಳಿದ್ದು, ಕಟ್ಟಡದೊಳಗೆ ತೆರಳುತ್ತಿದ್ದುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು.
ಬುಧವಾರ ಬೆಳಗಿನ ಜಾವ ರಾಜೇಶ್ ಮೃತದೇಹ ಕಟ್ಟಡದ ಮೊದಲನೇ ಮಹಡಿಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕಂಪನಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ಲಿಫ್ಟ್ ಕಡೆಗೆ ಕಾರ್ಯದ ನಿಮಿತ್ತ ಹೋಗುತ್ತಿರುವುದು ಕಂಡುಬಂದಿತ್ತು. ಫಾರೆನಿಕ್ಸ್ ತಜ್ಞರು ತನಿಖೆ ನಡೆಸಿದ್ದಾರೆ.
ರಾಜೇಶ್ ಮಹಡಿಯಿಂದ ಬಿದ್ದು ತಲೆಗೆ, ಕೈಕಾಲಿಗೆ ಗಾಯವಾಗಿ ಮೃತಪಟ್ಟಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.