ದೇಶದ ಬಡತನ ನಿರ್ಮೂಲನೆಯಲ್ಲಿ ಬ್ಯಾಂಕ್ ಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ: ನ್ಯಾ. ಅಬ್ದುಲ್ ನಝೀರ್
ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಮಂಗಳೂರು, ಫೆ.18: ದೇಶದ ಬಡತನ ನಿರ್ಮೂಲನಯಲ್ಲಿ ಬ್ಯಾಂಕ್ ಗಳು ಪ್ರಮುಖ ಪಾತ್ರವಹಿಸಬೇಕಾಗಿದೆ. ಬಡತನ ನಿರ್ಮೂಲನೆ ಸಂವಿಧಾನದ ಆಶಯವೂ ಆಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ತಿಳಿಸಿದ್ದಾರೆ.
ಕರ್ಣಾಟಕ ಬ್ಯಾಂಕ್‌ನ 98ನೇ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಸಭಾಂಗಣದಲ್ಲಿಂದು ಅವರು 'ಸಾಂವಿಧಾನಿಕ ಚಿಂತನೆ ಮತ್ತು ಬ್ಯಾಂಕಿಂಗ್' ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದರು.
ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಾಲ ನೀಡುವ ವ್ಯವಹಾರ ಹಣಕಾಸು ಸಂಸ್ಥೆ ಗಳ ಹೊರತಾದ ಮೂಲಗಳಲ್ಲಿ ದುಬಾರಿ ಬಡ್ಡಿ ವಿಧಿಸುವ ಮೂಲಕ ನಡೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ದೇಶದ ಸರಾಸರಿ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಪ್ರಮಾಣ ಕಡಿಮೆಯಾಗಬೇಕು. ಕಳೆದ ಕೆಲವು ದಶಕಗಳಲ್ಲಿ ಮುಖ್ಯವಾಗಿ ಕರ್ಣಾಟಕ ಬ್ಯಾಂಕ್ ಗಳ ರೀತಿಯ ಖಾಸಗಿ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಕಿರು ಸಾಲವನ್ನು ನೀಡಲು ಮುಂದೆ ಬರುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಲೇವಾದೇವಿ ವ್ಯವಹಾರ ಕಡಿತಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅತೀ ಸಣ್ಣ ಮೊತ್ತದ ಸಾಲ ನೀಡುವಲ್ಲಿ ಬ್ಯಾಂಕ್ ಗಳು ಸೇವಾವಲಯ ವನ್ನು ವಿಸ್ತರಿಸಬೇಕಾಗಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡುತ್ತಾ ಕರ್ಣಾಟಕ ಬ್ಯಾಂಕ್ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಐಎಸ್ಒ ಪ್ರಮಾಣ ಪತ್ರದ ದೇಶದ ಏಕೈಕ ಖಾಸಗಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 98 ವರ್ಷಗಳ ಸಂಸ್ಥಾಪಕರ ದಿನವನ್ನು ಆಚರಿಸುತ್ತಿದ್ದು ಎರಡು ವರ್ಷ ಗಳಲ್ಲಿ ಶತಮಾನೋತ್ಸವವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್ ನ ಬೆಳವಣಿಗೆಗೆ ಕಾರಣರಾದ ಗ್ರಾಹಕರಿಗೆ, ಶೇರುದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಬ್ಯಾಂಕಿನ ನಿರ್ದೇಶಕ ನ್ಯಾ.ಚಂದ್ರಶೇಖರ್, ನ್ಯಾ.ಅಬ್ದುಲ್ ನಝೀರ್ ಅವರ ಪತ್ನಿ ಸಮೀರಾ ಅಬ್ದುಲ್ ನಝೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀಣಾ ಟಿ.ಎನ್ ಪ್ರಾರ್ಥಿಸಿದರು, ಜೆನ್ನಿಫರ್ ಎಂ.ಬಿ.ಮೋರಸ್ ಕಾರ್ಯಕ್ರಮ ನಿರೂಪಿಸಿದರು. ಗೋಕುಲದಾಸ ಪೈ ವಂದಿಸಿದರು.