ಉಡುಪಿ: ವಕೀಲ ಪ್ರೇಮರಾಜ ಕಿಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ನಕಲಿ ದಾಖಲೆ, ವ್ಯಕ್ತಿಗಳನ್ನು ಸೃಷ್ಟಿಸಿ ದಲಿತ ಕುಟುಂಬಕ್ಕೆ ವಿಮಾ ಹಣ ವಂಚನೆ
ಪ್ರೇಮರಾಜ ಕಿಣಿ
ಉಡುಪಿ, ಫೆ.18: ನಕಲಿ ದಾಖಲೆ ಹಾಗೂ ವ್ಯಕ್ತಿಗಳನ್ನು ಸೃಷ್ಟಿಸಿ ಬಡ ದಲಿತ ಕುಟುಂಬಕ್ಕೆ ಹಾಗೂ ನ್ಯಾಯಾಲಯಕ್ಕೆ ವಂಚಿಸಿ ಬಡ ಕುಟುಂಬಕ್ಕೆ ಸಿಗಬೇಕಾಗಿದ್ದ 2.5 ಲಕ್ಷ ರೂ.ಗಳಿಗೂ ಅಧಿಕ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿದ ಉಡುಪಿಯ ವಕೀಲ ಅಲೆವೂರು ಪ್ರೇಮರಾಜ ಕಿಣಿಯ ವಿಚಾರಣೆ ನಡೆಸಿದ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಎರಡನೇ ಆರೋಪಿಯಾದ ವಿನಯಕುಮಾರ್ ಎಂಬಾತನಿಗೆ ಏಳು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಇವರು ಈಗಾಗಲೇ ಮೃತಪಟ್ಟಿರುವ ಮೂರನೇ ಆರೋಪಿ ಹರಿಶ್ಚಂದ್ರ ಆಚಾರ್ಯ ಅವರೊಂದಿಗೆ ಸೇರಿ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಡ ದಲಿತ ಕೂಲಿ ಕಾರ್ಮಿಕ ಸಾಧು ಮತ್ತು ಕುಟುಂಬಕ್ಕೆ ವಂಚಿಸಿ ಸುಮಾರು 2.5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿರುವ ಬಗ್ಗೆ ಉಡುಪಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಬಡ ದಲಿತ ಕುಟುಂಬದ ಪರವಾಗಿ ಉಡುಪಿಯ ದಲಿತ ಮುಖಂಡ ಜಯನ್ ಮಲ್ಪೆ ನೇತೃತ್ವದ ದಸಂಸ ತೀವ್ರ ಹೋರಾಟ ನಡೆಸಿತ್ತು.
ಪ್ರಕರಣದ ವಿವರ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ನಾರವಿ ಮೂಡಕೋಡು ಗ್ರಾಮದ ಕಡಂಬಿಲದ ಬಡ ಕೂಲಿ ಕಾರ್ಮಿಕರಾಗಿರುವ ಚಂಬು ಅವರ ಪತ್ನಿ ಕುಂದಾದು 2002ರ ಮೇ 13ರಂದು ಕೊಲ್ಲೂರಿಗೆಂದು ತೆರಳುತಿದ್ದಾಗ ಕಾರ್ಕಳ ತಾಲೂಕು ಕಸಬಾ ಗ್ರಾಮದ ಸಾಲ್ಮರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಬಗ್ಗೆ ಗಂಡ ಚಂಬು ಹಾಗೂ ಅವರ ಮಕ್ಕಳಾದ ಅಣ್ಣು, ಸಾಧು, ಅಕ್ಕು ಹಾಗೂ ಕಜವೆ ಅಪಘಾತ ವಿಮಾ ಪರಿಹಾರ ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ತನಿಖೆಯಾಗಿದ್ದು ನ್ಯಾಯಾಲಯ 2003ರ ಆಗಸ್ಟ್ನಲ್ಲಿ 1,22,400ರೂ. ಪರಿಹಾರ ಹಾಗೂ ಬಡ್ಡಿ ಸೇರಿ 1,33,246ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಅದನ್ನು ಪಡೆದ ಚಂಬು ಕುಟುಂಬ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಪರಿಹಾರ ನೀಡುವಂತೆ ಆದೇಶ ನೀಡಿತ್ತು.
ಉಚ್ಛ ನ್ಯಾಯಾಲಯದ ಆದೇಶದಂತೆ ವಿಮಾ ಕಂಪೆನಿ 1,85,600ರೂ. ಬಡ್ಡಿ ಸೇರಿ ಒಟ್ಟು 2,57,549 ರೂ.ಮೊತ್ತದ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿತ್ತು. ಆದರೆ ಈ ಹಂತದಲ್ಲಿ ಆರೋಪಿಗಳು, ಪಿರ್ಯಾದುದಾರರು, ನ್ಯಾಯಾಲಯ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ಬಡ ಕುಟುಂಬಕ್ಕೆ ಸಿಗಬೇಕಿದ್ದ ಪರಿಹಾರ ಮೊತ್ತವನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಪೂರ್ತಿ ಹಣವನ್ನು ಪಿರ್ಯಾದುದಾರರ ಅರಿವಿಗೆ ಬಾರದಂತೆ ಲಪಟಾಯಿಸಿದ್ದರು.
ಆರೋಪಿಗಳು ಮೂಲ ಅರ್ಜಿದಾರರು, ಪಿರ್ಯಾದಿ, ನ್ಯಾಯಾಲಯ ಹಾಗೂ ಬ್ಯಾಂಕಿಗೆ ಮೋಸ, ವಂಚನೆ ಮಾಡಿ ದುರ್ಲಾಭ ಪಡೆಯುವ ಉದ್ದೇಶದಿಂದ ಮೌಲ್ಯವುಳ್ಳ ಖೋಟಾ ಅಧಿಕಾರ ಪತ್ರವನ್ನು ತಯಾರಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಕಲಂ 467ರಡಿ ಜೀವಾವಧಿ ಅಥವಾ 10 ವರ್ಷಗಳ ಶಿಕ್ಷೆಗೆ ಗುರಿಪಡಿಸುವ ಅಪರಾಧವಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯೂ ಶಿಕ್ಷಾರ್ಹ ಅಪರಾಧವಾಗಿದೆ.
ಈ ಘಟನೆಗೆ ಸಂಬಂಧಿಸಿ ನಾರಾವಿಯ ಮೂಡುಕೋಡು ಗ್ರಾಮದ ಕಡಂಬಿಲದ ಸಾಧು ಅವರು ನೀಡಿದ ಪಿರ್ಯಾದಿ ಹೇಳಿಕೆಯಂತೆ ಆಗ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಧು ಟಿ.ಎಸ್. ಪ್ರಕರಣದ ಬಗ್ಗೆ 2011ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂತೋಷ್ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜಯಂತ್ ವಿ. ಶೆಟ್ಟಿ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ದಾಖಲೆಗಳನ್ನು ಸಂಗ್ರಹಿಸಿದ್ದರು.
ಪ್ರಕರಣದ ತನಿಖೆಯನ್ನು ನಡೆಸಿದ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ.ಪ್ರಭುದೇವ ಬಿ.ಮಾಣೆ ಅವರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಮ ಪಟ್ಟಿಯನ್ನೂ ಮೂವರು ಆರೋಪಿಗಳ ವಿರುದ್ಧ 2012ರಲ್ಲಿ ಸಲ್ಲಿಸಿದ್ದರು. ನ್ಯಾಯಾಲಯ ಈ ಪ್ರಕರಣದ ಬಗ್ಗೆ ವಿಚಾರಣೆಯನ್ನು ನಡೆಸಿತ್ತು.
ಈ ಪ್ರಕರಣದಲ್ಲಿ ಅಭಿಯೋಜನೆ ಪರ ಪ್ರಸ್ತುತ ಕಾನೂನು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ರಸಾದ್ ಆಳ್ವರನ್ನು ಕರ್ನಾಟಕ ಸರಕಾರ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸಿತ್ತು. ಪ್ರಕರಣದ ವಿಚಾರಣೆ ಕಾಲದಲ್ಲಿ ಒಟ್ಟು 33 ಮಂದಿ ಮೌಖಿಕ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿ ವಾದಪ್ರತಿವಾದ ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಅವರು ಪ್ರಕರಣದ 1 ಮತ್ತು 2ನೇ ಆರೋಪಿಗಳ ವಿರುದ್ಧ ದೋಷಾರೋಪಿಸಲಾದ ಎಲ್ಲಾ ಕಾನೂನು ಕಾಲಂಗಳ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧವನ್ನು 1 ಮತ್ತು 2ನೇ ಆರೋಪಿಗಳು ಎಸಗಿರುವುದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಸಾಕ್ಷಾಧಾರಗಳಿಂದ ಸಾಬೀತು ಆಗಿದೆ ಎಂದು ತೀರ್ಮಾನಿಸಿ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಗುರುವಾರ ತೀರ್ಪು ನೀಡಿದರು.
ಇಂದು ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶರು ಮೊದಲ ಆರೋಪಿ ಪ್ರೇಮರಾಜ ಕಿಣಿ ಅವರಿಗೆ ಜೀವಾವಧಿ ಶಿಕ್ಷೆ, ಎರಡನೇ ಆರೋಪಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿದರು. ಮೂರನೇ ಆರೋಪಿ ಈಗಾಗಲೇ ಮೃತಪಟ್ಟಿದ್ದಾರೆ. ಉಡುಪಿ ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿ ನಡೆಸುತಿದ್ದ ಅಲೆವೂರು ಪ್ರೇಮರಾಜ್ ಕಿಣಿಯನ್ನು ಪೊಲೀಸರು ನಿನ್ನೆಯೇ ಬಂಧಿಸಿ ಜೈಲಿಗಟ್ಟಿದ್ದಾರೆ.
''ತೀರ್ಪು ನಾವು ನಡೆಸಿದ ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ. ಈ ಪ್ರಕರಣದಲ್ಲಿ ಸಾಕಷ್ಟು ಆಮಿಷ ಮತ್ತು ಜೀವ ಬೆದರಿಕೆಗಳನ್ನು ಲೆಕ್ಕಿಸದೇ ಕಾನೂನಾತ್ಮಕ ಹೋರಾಟ ನಡೆಸಿದ್ದೇವೆ. ಅನ್ಯಾಯಕ್ಕೊಳಗಾದ ದಲಿತ ಕುಟುಂಬಕ್ಕೆ ನ್ಯಾಯ ನೀಡುವಲ್ಲಿ ನಮ್ಮ ವಿಶೇಷ ಮನವಿಯ ಮೇರೆಗೆ ಆಗಿನ ಸರಕಾರ ವಿಶೇಷ ಸರಕಾರಿ ಅಭಿಯೋಜಕರಾದ ಶಿವಪ್ರಸಾದ್ ಆಳ್ವರನ್ನು ನಿಯೋಜಿಸಿದೆ. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸಹಕರಿಸಿದ ಉಡುಪಿ ವಕೀಲರಿಗೆ, ಪೊಲೀಸರಿಗೆ ಕೃತಜ್ಞತೆಗಳು''.
-ಜಯನ್ ಮಲ್ಪೆ, ದಲಿತ ಚಿಂತಕ, ಹೋರಾಟಗಾರ