ಉಡುಪಿ: 34 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ, ಓರ್ವ ಮೃತ್ಯು

ಉಡುಪಿ, ಫೆ.18: ಜಿಲ್ಲೆಯಲ್ಲಿ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ ಶುಕ್ರವಾರ 34 ಆಗಿದ್ದು ಇಂದು ಉಡುಪಿಯ 64 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ. ದಿನದಲ್ಲಿ 83 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 279ಕ್ಕೆ ಇಳಿದಿದೆ.
ಕೋವಿಡ್ ಗುಣಲಕ್ಷಣಗಳನ್ನು ಹೊಂದಿದ್ದು, ಇತರ ಕೆಲವು ದೈಹಿಕ ಸಮಸ್ಯೆ ಇದ್ದ ಹಿರಿಯ ನಾಗರಿಕರು ಕಳೆದ ಜ.29ರಂದು ಖಾಸಗಿ ಆಸ್ಪತ್ರೆಗೆ ದಾಖಲಾ ಗಿದ್ದು, ಫೆ.1ಕ್ಕೆ ಮೃತಪಟ್ಟಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಬಲಿಯಾದವರ ಸಂಖ್ಯೆ 540ಕ್ಕೇರಿದೆ.
ಇಂದು ಪಾಸಿಟಿವ್ ಬಂದ 34 ಮಂದಿಯಲ್ಲಿ 18 ಮಂದಿ ಪುರುಷರು ಹಾಗೂ 16 ಮಂದಿ ಮಹಿಳೆಯರು. ಇವರಲ್ಲಿ 24 ಮಂದಿ ಉಡುಪಿ ತಾಲೂಕಿಗೆ, ಮೂವರು ಕುಂದಾಪುರ, ನಾಲ್ವರು ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದ ಮೂವರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 27 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ 83 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18069ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1265 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,253ಕ್ಕೇರಿದೆ.
7398 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 7398 ಮಂದಿ ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 609 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 674 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 3571 ಮಂದಿ ಮೊದಲ ಡೋಸ್ ಹಾಗೂ 3153 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 28 ಮಂದಿ ಮೊದಲ ಡೋಸ್ ಹಾಗೂ 1828 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.