ಹಿಜಾಬ್ ವಿವಾದ; ಕಾಂಗ್ರೆಸ್‌ಗೆ ಎಸ್‌ಡಿಪಿಐ ತಿರುಗೇಟು
ಮಂಗಳೂರು, ಫೆ.18: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತದ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಎಸ್‌ಡಿಪಿಐ ವಿರುದ್ಧ ನೀಡಿದ ಹೇಳಿಕೆಗೆ ಎಸ್‌ಡಿಪಿಐ ಜಿಲ್ಲಾ ನಾಯಕರು ತಿರುಗೇಟು ನೀಡಿದ್ದಾರೆ.
ಶಾಹುಲ್ ಹಮೀದ್ ಅನಗತ್ಯ ವಿಚಾರಗಳನ್ನು ಎಳೆದು ಹಾಕಿ ಎಸ್‌ಡಿಪಿಐ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಹಲವಾರು ಘಟನೆಗಳನ್ನು ಉಲ್ಲೇಖಿಸುತ್ತಾ ಎಸ್‌ಡಿಪಿಐ ಕೇವಲ ಡೆಡ್ ಲೈನ್ ಕೊಡುತ್ತಿದೆ ಎಂದು ಹತಾಶರಾಗಿ ನುಡಿದಿದ್ದಾರೆ. ನಾವು ಡೆಡ್‌ಲೈನ್ ಆದರೂ ಕೊಡುತ್ತೇವೆ, ಆದರೆ ಕಾಂಗ್ರೆಸ್‌ನಂತೆ ಡೆಡ್ ಆಗಿಲ್ಲ ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಸ್‌ಡಿಪಿಐ ರಾಜ್ಯಾಧ್ಯಕ್ಷರು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ತಳೆಯಬೇಕು, ಈ ವಿಷಯದಲ್ಲಿ ಕಾಂಗ್ರೆಸ್ ಮೌನವಾಗಿದೆ ಎಂದು ಆಪಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ಶಾಹುಲ್ ಹಮೀದ್ ಎಸ್‌ಡಿಪಿಐ ವಿರುದ್ಧ ಹರಿಹಾಯ್ದಿದ್ದರು.
ಈ ವಿಚಾರದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ನಿಲುವು ಇಲ್ಲ. ಕಾಂಗ್ರೆಸ್‌ನ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಅಧಿಕೃತ ನಿಲುವು ಏನು ಎಂಬುದನ್ನು ಬಹಿರಂಗಪಡಿಸಬೇಕು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವು ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡಲು ಇರುವುದೊ ಅಥವಾ ಎಸ್‌ಡಿಪಿಐ ಮೇಲೆ ಅಪಪ್ರಚಾರ ನಡೆಸಲು ಇರುವುದೋ ಎಂಬುದನ್ನು ಶಾಹುಲ್ ಹಮೀದ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.







