ಎನ್ಎಸ್ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ,ಇತರ ಇಬ್ಬರ ವಿರುದ್ಧ ಸಿಬಿಐನಿಂದ ಲುಕ್ಔಟ್ ನೋಟಿಸ್

ಚಿತ್ರಾ ರಾಮಕೃಷ್ಣ
ಮುಂಬೈ,ಫೆ.18: ಮಾಜಿ ಎನ್ಎಸ್ಇ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರ ಇಲ್ಲಿಯ ನಿವಾಸದಿಂದ ಹೊಸ ಅಂಶಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಿಬಿಐ ಶುಕ್ರವಾರ ಅವರನ್ನು ಪ್ರಶ್ನಿಸಿದೆ. ಇದಕ್ಕೂ ಮುನ್ನ ಸೆಬಿ ಮತ್ತು ಆದಾಯ ತೆರಿಗೆ ಇಲಾಖೆ ಚಿತ್ರಾರನ್ನು ವಿಚಾರಣೆಗೊಳಪಡಿಸಿದ್ದವು.
ಚಿತ್ರಾ,ಅವರ ಪೂರ್ವಾಧಿಕಾರಿ ರವಿ ನಾರಾಯಣ ಮತ್ತು ಎನ್ಎಸ್ಇದ ಮಾಜಿ ಗ್ರೂಪ್ ಆಪರೇಟಿಂಗ್ ಅಧಿಕಾರಿ ಹಾಗೂ ಎಂಡಿಯ ಸಲಹೆಗಾರ ಆನಂದ ಸುಬ್ರಮಣಿಯನ್ ಅವರ ವಿರುದ್ಧ ಲುಕ್ಔಟ್ ಸರ್ಕ್ಯುಲರ್ (ಎಲ್ಒಸಿ)ನ್ನೂ ಸಿಬಿಐ ಹೊರಡಿಸಿದೆ.
ಕಾನೂನು ಏಜೆನ್ಸಿಗಳಿಗೆ ಬೇಕಾಗಿರುವ ವ್ಯಕ್ತಿಗಳು ದೇಶವನ್ನು ತೊರೆಯದಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಒಸಿಯನ್ನು ಹೊರಡಿಸಲಾಗುತ್ತದೆ.
ಕೋ-ಲೊಕೇಷನ್ ಹಗರಣದಲ್ಲಿ ಸಿಬಿಐ ಚಿತ್ರಾ ಮತ್ತು ದಿಲ್ಲಿಯ ಒಪಿಜಿ ಸೆಕ್ಯುರಿಟೀಸ್ ಪ್ರೈ.ಲಿ.ನ ಮಾಲಿಕ ಹಾಗೂ ಪ್ರವರ್ತಕ ಸಂಜಯ ಗುಪ್ತಾ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಹಗರಣದಲ್ಲಿ ಕೆಲವು ಬ್ರೋಕರ್ಗಳಿಗೆ ಎನ್ಎಸ್ಇ ಸರ್ವರ್ನಲ್ಲಿ ಮೊದಲ ಪ್ರವೇಶಕ್ಕೆ ಆದ್ಯತೆ ಕಲ್ಪಿಸಲಾಗಿತ್ತು,ತನ್ಮೂಲಕ ಈ ಬ್ರೋಕರ್ಗಳು ಇತರ ಬ್ರೋಕರ್ಗಳಿಗಿಂತ ಮೊದಲು ಕ್ಷಣಕ್ಷಣದ ಮಾಹಿತಿಗಳನ್ನು ಪಡೆದುಕೊಂಡು ಲಾಭ ಮಾಡಿಕೊಂಡಿದ್ದರು.
ಸಿಬಿಐ ಸೆಬಿ ಮತ್ತು ಎನ್ಎಸ್ಇದ ಹೆಸರಿಸಲಾಗದ ಅಧಿಕಾರಿಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ.
ಗುಪ್ತಾ ಎನ್ಎಸ್ಇದ ಅಪರಿಚಿತ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ವರ್ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಎನ್ಎಸ್ಇ ಅಧಿಕಾರಿಗಳು 2010-12ರ ನಡುವಿನ ಅವಧಿಯಲ್ಲಿ ಕೋ-ಲೊಕೇಷನ್ ಸೌಲಭ್ಯವನ್ನು ಬಳಸಿಕೊಂಡು ಗುಪ್ತಾರ ಕಂಪನಿಯು ಎನ್ಎಸ್ಇ ಸರ್ವರ್ಗೆ ಮೊದಲು ಲಾಗಿನ್ ಆಗಲು ಅಕ್ರಮವಾಗಿ ಅವಕಾಶವನ್ನು ಕಲ್ಪಿಸಿದ್ದರು ಮತ್ತು ಇದು ಮಾರುಕಟ್ಟೆಯಲ್ಲಿನ ಇತರ ಬ್ರೋಕರ್ಗಳಿಗಿಂತ ಮೊದಲು ಮಾಹಿತಿಯನ್ನು ಪಡೆದುಕೊಳ್ಳಲು ಅದಕ್ಕೆ ನೆರವಾಗಿತ್ತು ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಆರೋಪಿಸಿದೆ. ತೆರಿಗೆ ವಂಚನೆಯ ಶಂಕೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಚಿತ್ರಾ ಮತ್ತು ಅವರ ಮಾಜಿ ಸಲಹೆಗಾರ ಆನಂದ ಸುಬ್ರಮಣಿಯನ್ ಅವರ ನಿವಾಸಗಳಲ್ಲಿ ಗುರುವಾರ ಶೋಧ ಕಾರ್ಯಾಚರಣೆ ಆರಂಭಿಸಿದ್ದು,ಶುಕ್ರವಾರವೂ ಮುಂದುವರಿದಿದೆ.







