ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಧರಣಿ ಮುಂದುವರಿಕೆ; ಹೆದ್ದಾರಿ ಗುತ್ತಿಗೆದಾರರಿಗಾಗಿ ಭಿಕ್ಷೆ ಬೇಡಿ ನಿಧಿ ಸಂಗ್ರಹ

ಮಂಗಳೂರು, ಫೆ,18: ಸುರತ್ಕಲ್ ಸಮೀಪದ ಎನ್‌ಐಟಿಕೆ ಟೋಲ್‌ಗೇಟನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಫೆ.7ರಿಂದ ಆರಂಭಗೊಂಡ ಆಹೋರಾತ್ರಿ ಧರಣಿಯು ಶುಕ್ರವಾರವೂ ನಡೆದಿದೆ.
ಗುರುವಾರ ಪ್ರತಿಭಟನಾಕಾರ ಜೊತೆ ಮಾತುಕತೆ ನಡೆಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಧರಣಿಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದ್ದರೂ ಕೂಡ ಶುಕ್ರವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಧರಣಿಗೆ ನೇತೃತ್ವ ನೀಡಿರುವ ಆಸಿಫ್ ಆಪತ್ಬಾಂಧವ ಭಿಕ್ಷುಕರ ವೇಷ ಧರಿಸಿ ಸಾರ್ವಜನಿಕರ ಮುಂದೆ ಭಿಕ್ಷಾಟನೆ ಮಾಡಿ ಹೆದ್ದಾರಿಯ ಗುತ್ತಿಗೆದಾರರಿಗಾಗಿ ನಿಧಿ ಸಂಗ್ರಹಿಸುವ ಮೂಲಕ ಗಮನ ಸೆಳೆದರು. ಅಲ್ಲದೆ ನ್ಯಾಯ ಸಿಗುವವರೆಗೆ ಆಹೋರಾತ್ರಿ ಧರಣಿಯನ್ನು ಮುಂದುವರಿಸಲಾಗುವುದು ಎಂದಿದ್ದಾರೆ.
ಸುರತ್ಕಲ್ ಎನ್‌ಐಟಿಕೆಯಿಂದ ನಂತೂರು ಜಂಕ್ಷನ್‌ವರಗಿನ ರಾಷ್ಟ್ರೀಯ ಹೆದ್ದಾರಿ-66ರ ಕಾಮಗಾರಿಗೆ ಗುತ್ತಿಗೆದಾರ ಇರ್ಕಾನ್ ಸಂಸ್ಥೆ 363 ಕೋ.ರೂ. ವೆಚ್ಚ ಮಾಡಿದೆ. ಅದರಲ್ಲಿ ಈವರೆಗೆ 229 ಕೋ.ರೂ.ವನ್ನು ಗುತ್ತಿಗೆದಾರು ಸಂಗ್ರಹ ಮಾಡಿದೆ. ಬಾಕಿ ಮೊತ್ತ ಸಂಗ್ರಹವಾದ ಬಳಿಕ ಶೇ.60ರಷ್ಟು ಟೋಲ್ ಶುಲ್ಕದಲ್ಲಿ ಕಡಿತಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಹಾಗಾಗಿ ನಾನಿಂದು ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಗುತ್ತಿಗೆದಾರರ ಸಂಸ್ಥೆಗಾಗಿ ನಿಧಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತೇನೆ. ಅದೂ ಸಾಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಸಂಘ-ಸಂಸ್ಥೆಗಳ ಜೊತೆಗೂಡಿ ರಾಜ್ಯಾದ್ಯಂತ ಭಿಕ್ಷಾಟನೆ ಮಾಡಲಿದ್ದೇನೆ ಎಂದು ಆಸೀಫ್ ಆಪತ್ಭಾಂಧವ ತಿಳಿಸಿದ್ದಾರೆ.
ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಮಾಜಿ ಕಾರ್ಪೊರೇಟರ್ ಅಯಾಝ್ ಚೊಕ್ಕಬೆಟ್ಟು, ಸಾಮಾಜಿಕ ಕಾರ್ಯಕರ್ತ ಬಿ.ಕೆ. ಹಿದಾಯತ್, ನ್ಯೂ ಸ್ಟಾರ್ ಕ್ರಿಕೆಟರ್ಸ್ ಚೊಕ್ಕಬೆಟ್ಟು ಇದರ ಅಧ್ಯಕ್ಷ ಇಮ್ರಾನ್, ಉದ್ಯಮಿ ರಮಲಾನ್ ಅಬ್ಬಾಸ್, ಜಾಸಿಂ ಚೊಕ್ಕಬೆಟ್ಟು, ಕೃಷ್ಣಮೂರ್ತಿ ಆಚಾರ್ಯ ಉಡುಪಿ, ಚರಣ್ ಬಂಗೇರಾ, ಯುವರಾಜ್, ಸೌರಭ್ ಬಳ್ಳಾಲ್, ಮುಕೇಶ್ ಮಲ್ಪೆ, ಶೇಖರ್ ಹಾವಂಜೆ, ದಯಾನಂದ ಕಪ್ಪೆಟ್ಟು, ಜೇಮ್ಸ್ ಡಿಸೋಜ ಮತ್ತಿತರರು ಸಾಥ್ ನೀಡಿದರು.







