ಮಾರ್ಚ್ 4ರಂದು ರಾಜ್ಯ ಬಜೆಟ್ ಮಂಡನೆ?

ಬೆಂಗಳೂರು, ಫೆ. 18: ‘ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಗೆ ಮಾರ್ಚ್ 4 ಅಥವಾ 7ರಂದು ಬಜೆಟ್ ಅಧಿವೇಶನವನ್ನು ಆರಂಭಿಸಲು ಸಚಿವ ಸಂಪುಟದಲ್ಲಿ ಸಮಾಲೋಚನೆ ನಡೆದಿದ್ದು, ಬಜೆಟ್ ಮಂಡನೆ ದಿನಾಂಕ ಅಂತಿಮಗೊಳಿಸಲು ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.
ಶುಕ್ರವಾರ ವಿಧಾನಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲು ಎಲ್ಲ ಇಲಾಖೆಗಳ ಸಭೆ ಕರೆದಿದ್ದೇನೆ. ಪ್ರಮುಖ ಸಂಘ-ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕಿದ್ದು, ಆ ಬಳಿಕ ದಿನಾಂಕ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಸಂಪುಟ ಸಭೆಯಲ್ಲಿ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) (ತಿದ್ದುಪಡಿ) ನಿಯಮಗಳು-2022ಕ್ಕೆ ಅನುಮೋದನೆ ನೀಡಲಾಗಿದೆ. ಇದರ ಮೂಲಕ ಕೆಪಿಎಸ್ಸಿ ವ್ಯಕ್ತಿತ್ವ ಪರೀಕ್ಷೆ (ವೈಓ)ದಲ್ಲಿನ ಈಗಿರುವ 50 ಅಂಕವನ್ನು 25ಕ್ಕೆ ಕಡಿತಗೊಳಿಸುವ ನಿಟ್ಟಿನಲ್ಲಿ ನಿಯಮಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಗೊತ್ತಾಗಿದೆ.
ಕರ್ನಾಟಕ ರಾಜ್ಯದಲ್ಲಿ 2021-22ನೆ ಸಾಲಿನಿಂದ ಪಿ.ಎಂ. ಕೃಷಿ ಸಿಂಚಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯನ್ನು ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ. ಕೆಪಿಎಸ್ಸಿಯಲ್ಲಿ ಖಾಲಿ ಇರುವ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ತೀರ್ಮಾನ. ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾಸ್ಪತ್ರೆ, ತಾಲೂಕು ಮಟ್ಟದ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೆಡಿಕಲ್ ಗ್ಯಾಸ್ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಹಾಗೂ ಸಂಬಂಧಿಸಿದ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳ ರೂ. 222 ಕೋಟಿ ರೂ.ಗಳ ಪರಿಷ್ಕøತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಗೆ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ135 ಕೋಟಿ ರೂ.ಅಂದಾಜಿಗೆ ಸಂಪುಟ ಸಭೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 60 ವಾರ್ಡ್‍ಗಳಲ್ಲಿ ಪ್ರಾಥಮಿಕ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯವನ್ನು ನಿರ್ವಹಿಸುತ್ತಿರುವ ಮೆ.ಆಂಟೋನಿ ವೇಸ್ಟ್ ಹ್ಯಾಂಡಲಿಂಗ್ ಸೆಲ್ ಪ್ರೈ ಲಿ., ಮುಂಬೈ ಇವರ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ತೀರ್ಮಾನ ಮಾಡಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.







