ಬಿಹಾರ: ಜೆಡಿಯು ನಾಯಕನ ಹತ್ಯೆ

ಸಾಂದರ್ಭಿಕ ಚಿತ್ರ ಸಾಂದರ್ಭಿಕ ಚಿತ್ರ
ಪಾಟ್ನಾ, ಫೆ. 17: ಜೆಡಿಯು ನಾಯಕರೋರ್ವ(50)ರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಬಿಹಾರದ ಮಧೇಪುರದಲ್ಲಿ ಶುಕ್ರವಾರ ಸಂಭವಿಸಿದೆ. ಮೃತಪಟ್ಟ ಜೆಡಿಯು ನಾಯಕರನ್ನು ಪ್ರದೀಪ್ ಶಾ ಎಂದು ಗುರುತಿಸಲಾಗಿದೆ. ಇವರು ಬಿಹಾರಿಗಂಜ್ ಮಾರುಕಟ್ಟೆ ಪ್ರದೇಶದಲ್ಲಿರುವ ತನ್ನ ನಿವಾಸದ ಹೊರಗೆ ನಿಂತುಕೊಂಡಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಈ ಹತ್ಯೆ ಘಟನೆ ಹಿನ್ನೆಲೆಯಲ್ಲಿ ನೂರಾರು ಜೆಡಿಯು ಹಾಗೂ ಬಿಜೆಪಿ ಬೆಂಬಲಿಗರು ರಸ್ತೆ ತಡೆ ನಡೆಸಿದರು. ಸ್ಥಳೀಯ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರದೀಪ್ ಶಾ ಅವರು ಜೆಡಿಯುನ ಪ್ರಧಾನ ಕಾರ್ಯದರ್ಶಿ (ಅತ್ಯಂತ ಹಿಂದುಳಿದ ವರ್ಗದ ಘಟಕ)ಯಾಗಿದ್ದರು. ಅವರು ಇತ್ತೀಚೆಗೆ ಪೂರ್ಣಗೊಂಡ ಪಂಚಾಯತ್ ಚುನಾವಣೆಯಲ್ಲಿ ಸಕ್ರಿಯರಾಗಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿರುವ ಮಧೇಪುರದ ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್, ಶಾಂತಿ ಕಾಪಾಡುವಂತೆ ಪ್ರತಿಭಟನಕಾರರಲ್ಲಿ ಮನವಿ ಮಾಡಿದ್ದಾರೆ. ಘಟನಾ ಸ್ಥಳದಿಂದ ಸ್ವೀಕರಿಸಲಾದ ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಪೊಲೀಸರು ವಿವಿಧ ಸ್ಥಳಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.





